ಚಿತ್ರ Instagram 
ಟಾಲಿವುಡ್

ನಟನೆಯಿಂದ 4 ವರ್ಷಗಳ ಬ್ರೇಕ್: ಮಾಧವನ್ 2.0 ರೂಪಾಂತರದ ಹಿಂದೆ ಅಡಗಿದೆ ಮರೆಯಲಾಗದ ಅವಮಾನದ ಕಥೆ! R Madhavan

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಆರ್. ಮಾಧವನ್ ಕೂಡಾ ಒಬ್ಬರು.
  • ಇವರು ಕೇವಲ ನಟನಾಗಿ ಉಳಿಯದೇ, ಚಿತ್ರಕಥೆಗೆ ಜೀವ ತುಂಬುವ ಅದ್ಭುತ ಕಲಾವಿದರಾಗಿ ಬೆಳೆದಿದ್ದಾರೆ
  • ಅವರ ಯಶಸ್ಸಿನ ಹಿಂದೆ ನೋವು ಹಾಗೂ ದೀರ್ಘಕಾಲದ ಮೌನವಿದೆ ಎಂಬ ವಿಷಯವನ್ನು ನಟ ಮಾಧವನ್ ಹಂಚಿಕೊಂಡಿದ್ದಾರೆ
ಮುಂಬೈ: ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಆರ್. ಮಾಧವನ್ (R Madhavan) ಕೂಡಾ ಒಬ್ಬರು. ಇವರು ಕೇವಲ ನಟನಾಗಿ ಉಳಿಯದೇ, ಚಿತ್ರಕಥೆಗೆ ಜೀವ ತುಂಬುವ ಅದ್ಭುತ ಕಲಾವಿದರಾಗಿ ಬೆಳೆದಿದ್ದಾರೆ. ಆದರೆ, ಅವರ ಯಶಸ್ಸಿನ ಹಿಂದೆ ನೋವು ಹಾಗೂ ದೀರ್ಘಕಾಲದ ಮೌನವಿದೆ ಎಂಬ ವಿಷಯವನ್ನು ನಟ ಮಾಧವನ್​ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಅನ್‌ಫಿಲ್ಟರ್ಡ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ ಮಾಧವನ್,​ ಆರಂಭಿಕ ದಿನಗಳಲ್ಲಿ ಚಾಕೊಲೇಟ್ ಬಾಯ್ ಅಥವಾ ಪ್ರೇಮಿ ಹುಡುಗ ಎಂಬ ಹೆಸರಿಗೆ ಸೀಮಿತವಾಗಿದ್ದೆ. ಈ ಇಮೇಜ್​ ಬದಲಾಗಲು ಒಂದು ಕಾರಣವಿದೆ. ಅದೇನೆಂದರೆ ಸ್ವಿಟ್ಜರ್ಲೆಂಡ್‌ನ ಸುಂದರ ಪ್ರದೆಶವೊಂದರಲ್ಲಿ ತಮಿಳು ಹಾಡಿಗೆ ನೃತ್ಯ ಮಾಡುತ್ತಾ ಶೂಟಿಂಗ್​ನಲ್ಲಿ ತೊಡಗಿದ್ದಾಗ ಅಲ್ಲಿನ ಸ್ಥಳೀಯ ರೈತನೊಬ್ಬ ನನ್ನನ್ನು ತಿರಸ್ಕಾರದಿಂದ ನೋಡಿದ್ದರು.
ಆ ವೇಳೆ ನಾನು ಅವನನ್ನು ನೋಡಿ ನೀವು ಚೆನ್ನೈಗೆ ಬನ್ನಿ, ನಾನು ಯಾರೆಂದು ನಿಮಗೆ ತೋರಿಸುತ್ತೇನೆ ಎಂದು ಹೇಳಿದೆ. ಆ ಸಮಯದಲ್ಲಿ ನನಗೆ ನಿಜವಾಗಿಯೂ ಮನನೊಂದಿತ್ತು. ಆದರೆ ಇತರರ ರಾಗಗಳಿಗೆ ನೃತ್ಯ ಮಾಡುತ್ತಿದ್ದೇನೆ ಎಂದು ನನಗೆ ಇದ್ದಕ್ಕಿದ್ದಂತೆ ಅನಿಸಲು ಪ್ರಾರಂಭಿಸಿತು ಎಂದರು.

ನಾಲ್ಕು ವರ್ಷಗಳ ಕಠಿಣ ವಿರಾಮ

ಈ ಘಟನೆ ನಡೆದ ನಂತರ ಸುಮಾರು 4 ವರ್ಷಗಳ ಕಾಲ ಮಾಧವನ್​ ನಟನೆಯಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡರು. ಒಬ್ಬ ಜನಪ್ರಿಯ ನಟ ವೃತ್ತಿಜೀವನದ ಉತ್ತುಂಗದಲ್ಲಿ ಇಂತಹ ವಿರಾಮ ತೆಗೆದುಕೊಳ್ಳುವುದು ಸುಲಭದ ಮಾತಲ್ಲ.
ಆದರೆ, ಮಾಧವನ್ ಈ ಸಮಯವನ್ನು ತಮ್ಮ ಆತ್ಮಾವಲೋಕನಕ್ಕಾಗಿ ಬಳಿಸಿಕೊಂಡು, ತಮಗೆ ಬರುವಂತಹ ರೊಮ್ಯಾಂಟಿಕ್​ ಕಥೆಗಳನ್ನು ತಿರಸ್ಕರಿಸಿದರು. ಬದಲಾಗಿ, ತಮಗೊಬ್ಬ ನಟನಾಗಿ ಸವಾಲು ನೀಡುವ ಕಥೆಗಳಿಗಾಗಿ ಕಾಯಲು ಪ್ರಾರಂಭಿಸಿದರು.
ಈ ಅವಧಿಯಲ್ಲಿ ನಾನು ನಟನೆ, ಜಾಹಿರಾತುಗಳನ್ನು ನಿಲ್ಲಿಸಿದೆ ಬದಲಾಗಿ ಭಾರತದಾದ್ಯಂತ ಪ್ರಯಾಣ ನಡೆಸಲು ಪ್ರಾರಂಭಿಸಿದೆ. ರಿಕ್ಷಾ ಚಾಲಕರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡೆ. ಆ ನಾಲ್ಕು ವರ್ಷಗಳ ಒಳನೋಟವು ಬಹುಶಃ ಈಗ ತಿನ್ನುತ್ತಿದ್ದೇನೆ ಎಂದರು.
ಈ ವಿರಾಮದ ನಂತರ ಮರಳಿದ ಮಾಧವನ್ ಅವರನ್ನು ಅಭಿಮಾನಿಗಳು 'ಮಾಧವನ್ 2.0' ಎಂದು ಕರೆಯುತ್ತಿದ್ದಾರೆ. ಅವರ ಮರಳುವಿಕೆಯ ನಂತರ ಬಂದ ಚಿತ್ರಗಳು ಅವರ ಅಭಿನಯದ ಹೊಸ ಆಯಾಮವನ್ನು ಪರಿಚಯಿಸಿದವು.
ಮಾಧವನ್ ಅವರ ಈ ಪಯಣವು ಪ್ರತಿಭೆ ಇದ್ದರೂ ಸರಿಯಾದ ಹಾದಿಗಾಗಿ ಕಾಯುವ ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಕಲಿಸುತ್ತದೆ. ಬರಿ ನೃತ್ಯ ಮಾಡುವ ಪ್ರೇಮಿ ಹುಡುಗ ಎಂಬ ಚೌಕಟ್ಟಿನಿಂದ ಹೊರಬಂದು, ಸಂಕೀರ್ಣ ಪಾತ್ರಗಳನ್ನು ನಿಭಾಯಿಸುವ ಅದ್ಭುತ ನಟನಾಗಿ ಅವರು ಹೊರಹೊಮ್ಮಿದ್ದಾರೆ.
ತಮ್ಮ ವೃತ್ತಿಜೀವನದ ಈ ಬದಲಾವಣೆಯ ಬಗ್ಗೆ ಮಾತನಾಡುವ ಅವರು, ಆ ವಿರಾಮ ನನ್ನನ್ನು ನಾನು ಕಂಡುಕೊಳ್ಳಲು ಸಹಾಯ ಮಾಡಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸಿನಿಮಾ ಪ್ರೇಮಿಗಳ ಪಾಲಿಗೆ ಮಾಧವನ್ ಅವರ ಈ ಎರಡನೇ ಇನ್ನಿಂಗ್ಸ್ ಸುವರ್ಣ ಯುಗದಂತಿದೆ (ಏಜೆನ್ಸೀಸ್​).