- ದೆವ್ವ ನೋಡಿರುವುದಾಗಿ ನಟಿ ಕೃತಿ ಶೆಟ್ಟಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ
- ಕೃತಿ ನಟನೆಯ ವಾ ವಾಥಿಯರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ
- ವಾ ವಾಥಿಯರ್ ಶೂಟಿಂಗ್ ಸಮಯದಲ್ಲಿ ನಿಜವಾದ ದೆವ್ವ ನೋಡಿದ್ದಾಗಿ ಕೃತಿ ಹೇಳಿದ್ದಾರೆ
- ತಾಯಿ ನನ್ನೊಂದಿಗಿದ್ದರು ಆದ್ದರಿಂದ ನಾನು ಬದುಕುಳಿದೆ ಎಂದು ಕೃತಿ ತಿಳಿಸಿದ್ದಾರೆ
Krithi Shetty : ಆ ಆಧುನಿಕ ಕಾಲದಲ್ಲಿ ಬಹುತೇಕ ಮಂದಿ ದೇವರು ಹಾಗೂ ದೆವ್ವಗಳ ಬಗ್ಗೆ ನಂಬುವುದಿಲ್ಲ. ಈ ವಿಚಾರಗಳ ಬಗ್ಗೆ ಮಾತನಾಡಿದರೆ ಹೆಚ್ಚು ಗಮನ ಹರಿಸುವುದೇ ಇಲ್ಲ. ಅಷ್ಟೇ ಏಕೆ ಅವುಗಳ ಬಗ್ಗೆ ಮಾತನಾಡಲು ಸಹ ಇಷ್ಟಪಡುವುದಿಲ್ಲ. ಯಾರಾದರೂ ದೇವರು ಹಾಗೂ ದೆವ್ವವನ್ನು ನೋಡಿದ್ದೇನೆ ಎಂದು ಹೇಳಿದರೆ, ಅವರನ್ನು ವಿಚಿತ್ರವಾಗಿ ನೋಡುತ್ತಾರೆ ಹಾಗೂ ನಗುತ್ತಾರೆ. ಈ ಡಿಜಿಟಲ್ ಯುಗದಲ್ಲೂ ಇದನೆಲ್ಲ ನೀವು ನಂಬುತ್ತೀರಾ ಎಂದು ಕೇಳುತ್ತಾರೆ. ಆದರೆ, ಹೆಚ್ಚಿನ ಮಂದಿ ದೇವರು ಹಾಗೂ ದೆವ್ವದ ಅಸ್ತಿತ್ವವನ್ನು ನಂಬುತ್ತಾರೆ. ಅಂಥವರಲ್ಲಿ ನಟಿ ಕೃತಿ ಶೆಟ್ಟಿ ಕೂಡ ಒಬ್ಬರು ಸ್ವತಃ ದೆವ್ವ ನೋಡಿರುವುದಾಗಿ ಕೃತಿ ಹೇಳಿಕೊಂಡಿದ್ದಾರೆ.
ಅಂದಹಾಗೆ, ಚಿತ್ರರಂಗದಲ್ಲಿ ಸ್ಟಾರ್ ಡಮ್ ಪಡೆಯುವುದು ಅಷ್ಟು ಸುಲಭವಲ್ಲ. ಸಾಕಷ್ಟು ಸಿನಿಮಾ ಮಾಡಿದರೂ ಹೆಸರು, ಮನ್ನಣೆ ಸಿಗುವುದಿಲ್ಲ. ಆದರೆ, ಕೆಲವರು ಕೇವಲ ಒಂದು ಅಥವಾ ಎರಡು ಸಿನಿಮಾಗಳಲ್ಲಿ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಚೊಚ್ಚಲ ಸಿನಿಮಾದಿಂದಲೇ ಸ್ಟಾರ್ ಪಟ್ಟ ಪಡೆದುಬಿಡುತ್ತಾರೆ. ಆ ಸಾಲಿಗೆ ಸೇರಿದವರಲ್ಲಿ ನಟಿ ಕೃತಿ ಶೆಟ್ಟಿ ಕೂಡ ಒಬ್ಬರು. ಕೃತಿ ನಟಿಸಿದ ಚೊಚ್ಚಲ ಸಿನಿಮಾ 'ಉಪ್ಪೇನ' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಇದಾದ ಬಳಿಕ ಸಾಕಷ್ಟು ಆಫರ್ಗಳು ಕೃತಿಯನ್ನು ಅರಸಿ ಬಂದವು. ಆದರೆ, ಇತ್ತೀಚೆಗೆ ಆಫರ್ಗಳು ಕಡಿಮೆ ಆಗಿರುವಂತೆ ತೋರುತ್ತಿವೆ. ತುಂಬಾ ಗ್ಯಾಪ್ ನಂತರ ಅವರ ನಟನೆಯ ವಾ ವಾಥಿಯರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ವಾ ವಾಥಿಯರ್ ಸಿನಿಮಾ, ಟೀಸರ್ ಮತ್ತು ಟ್ರೇಲರ್ನಿಂದ ಈಗಾಗಲೇ ಭಾರಿ ಸದ್ದು ಮಾಡಿದೆ. ಈ ಚಿತ್ರ ಡಿಸೆಂಬರ್ 12 ರಂದು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕೃತಿ ಶೆಟ್ಟಿ, ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಿಜವಾದ ದೆವ್ವವನ್ನು ನೋಡಿದ್ದಾಗಿ ಹೇಳಿದ್ದಾರೆ.
ವಾ ವಾಥಿಯರ್ ಚಿತ್ರದಲ್ಲಿ, ನಾನು ಆತ್ಮಗಳೊಂದಿಗೆ ಮಾತನಾಡುವ ಪಾತ್ರವನ್ನು ನಿರ್ವಹಿಸಿದ್ದೇನೆ. ನನ್ನ ತಾಯಿ ಮತ್ತು ನಾನು ಶೂಟಿಂಗ್‌ಗಾಗಿ ಹೋಟೆಲ್‌ನಲ್ಲಿ ತಂಗಿದ್ದೆವು. ಒಂದು ದಿನ ಮಧ್ಯರಾತ್ರಿ, ನಾನು ಒಂದು ಆತ್ಮವನ್ನು ನೋಡಿದೆ. ಆ ವೇಳೆ ನನಗೆ ತುಂಬಾ ಭಯವಾಯಿತು. ಬಳಿಕ ನಾನು ಸದ್ದು ಮಾಡದೇ ಹೋಗಿ ಲೈಟ್ ಆಫ್ ಮಾಡಿದೆ. ಇದೇ ವೇಳೆ ದೊಡ್ಡ ಶಬ್ಧವೂ ಕೇಳಿಸಿತು. ಬಳಿಕ ಆತ್ಮವೂ ಕಣ್ಮರೆಯಾಯಿತು. ಆ ದಿನ, ನನ್ನ ತಾಯಿ ನನ್ನೊಂದಿಗಿದ್ದರು, ಆದ್ದರಿಂದ ನಾನು ಬದುಕುಳಿದೆ. ಇಲ್ಲದಿದ್ದರೆ, ನನ್ನ ಹೃದಯ ನಿಂತುಹೋಗುತ್ತಿತ್ತು ಎಂದು ಕೃತಿ ಶೆಟ್ಟಿ ಹೇಳಿದ್ದಾರೆ.
ಕೃತಿ ಶೆಟ್ಟಿಯವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೃತಿ ಇನ್ನೂ ಮಗುವಿನ ಮನಸ್ಥಿತಿಯನ್ನು ಹೊಂದಿದ್ದಾರೆ. ಏಕೆಂದರೆ, ಅವರು ಚಿತ್ರದಲ್ಲಿ ಆತ್ಮಗಳೊಂದಿಗೆ ಮಾತನಾಡುವ ಪಾತ್ರವನ್ನು ನಿರ್ವಹಿಸಿರುವುದರಿಂದ ಅದು ಕನಸಲ್ಲೂ ಬಂದಿರಬಹುದು. ದೆವ್ವ ನೋಡಿದ್ದೇನೆ ಎನ್ನುವುದು ಒಂದು ಭ್ರಮೆಯಷ್ಟೇ. ನಿಜವಾಗಿಯೂ ಯಾವುದೇ ದೆವ್ವ ಇಲ್ಲ. ದಯವಿಟ್ಟು ವಾಸ್ತವಕ್ಕೆ ಬನ್ನಿ ಮೇಡಂ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ವಾ ವಾಥಿಯಾರ್ ಸಿನಿಮಾವನ್ನು ನಳನ್ ಕುಮಾರಸ್ವಾಮಿ ಎಂಬುವರು ನಿರ್ದೇಶಿಸಿದ್ದು, ಕಾಲಿವುಡ್ ಸೂಪರ್ಸ್ಟಾರ್ ಕಾರ್ತಿ ನಾಯಕನಾಗಿ ಅಭಿನಯಿಸಿದ್ದಾರೆ. ಕೆ. ಇ. ಜ್ಞಾನವೇಲ್ ರಾಜಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ.
ಇದಿಷ್ಟೇ ಅಲ್ಲದೆ, ಸದ್ಯ ತಮಿಳು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟ ಪ್ರದೀಪ್ ರಂಗನಾಥನ್ ಅವರ ಲವ್ ಇನ್ಶುರೆನ್ಸ್ ಕಂಪನಿ ಸಿನಿಮಾಗೂ ಕೃತಿ ನಾಯಕಿಯಾಗಿದ್ದಾರೆ. ಕಾರ್ತಿ ಮತ್ತು ಪ್ರದೀಪ್ ಅವರಂತಹ ಒಳ್ಳೆಯ ನಟರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಭವಿಷ್ಯದಲ್ಲಿಯೂ ಒಳ್ಳೆಯ ಕಥೆಗಳನ್ನು ಮಾಡುವತ್ತ ಹೆಜ್ಜೆ ಹಾಕುತ್ತೇನೆ ಎಂದು ಕೃತಿ ಹೇಳಿದ್ದಾರೆ, (ಏಜೆನ್ಸೀಸ್).