ನಟಿ ಈಶಾ ರೆಬ್ಬಾ  
ಟಾಲಿವುಡ್

ಜೂಮ್ ಮಾಡಿ ಇಂಚಿಂಚೂ ನೋಡುತ್ತಿದ್ದರು... ಸ್ಟಾರ್​ ನಿರ್ದೇಶಕನ ಬಗ್ಗೆ ನಟಿ ಈಶಾ ರೆಬ್ಬಾ ಶಾಕಿಂಗ್​ ಕಾಮೆಂಟ್​! Isha Rebba

ಪ್ರಮುಖ ಮುಖ್ಯಾಂಶಗಳು

  • ಒಂದೊಳ್ಳೆ ಯಶಸ್ಸಿಗಾಗಿ ಕಾಯುತ್ತಿರುವವರಲ್ಲಿ ನಾಯಕಿ ಈಶಾ ರೆಬ್ಬಾ ಕೂಡ ಒಬ್ಬರು
  • ತೆಲುಗು ನಟಿಯಾಗಿ ಚಿತ್ರರಂಗಕ್ಕೆ ಬಂದು ಸುಮಾರು 12 ವರ್ಷಗಳೇ ಕಳೆದಿದ್ದರೂ ಹಿಟ್​ ಸಿನಿಮಾ ಇಲ್ಲ
  • ಚಿತ್ರರಂಗದ ವಿಚಾರಕ್ಕೆ ಬಂದರೆ, ಇಲ್ಲಿ ಚರ್ಮದ ಬಣ್ಣ ಬಹಳ ಮುಖ್ಯ ಅನ್ನೋದು ಸಾರ್ವಕಾಲಿಕ ಸತ್ಯ
ಹೈದರಾಬಾದ್​: ಒಂದೊಳ್ಳೆ ಯಶಸ್ಸಿಗಾಗಿ ಕಾಯುತ್ತಿರುವವರಲ್ಲಿ ನಾಯಕಿ ಈಶಾ ರೆಬ್ಬಾ ( Isha Rebba ) ಕೂಡ ಒಬ್ಬರು. ತೆಲುಗು ನಟಿಯಾಗಿ ಚಿತ್ರರಂಗಕ್ಕೆ ಬಂದು ಸುಮಾರು 12 ವರ್ಷಗಳೇ ಕಳೆದಿದ್ದರೂ, ಒಂದೇ ಒಂದ ಹಿಟ್ ಸಿನಿಮಾ ನೀಡಲು ಸಾಧ್ಯವಾಗಿಲ್ಲ. ಇದೀಗ ತಮ್ಮ ಕಹಿ ಅನುಭವದ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಚಿತ್ರರಂಗದ ವಿಚಾರಕ್ಕೆ ಬಂದರೆ, ಇಲ್ಲಿ ಚರ್ಮದ ಬಣ್ಣ ಬಹಳ ಮುಖ್ಯ ಅನ್ನೋದು ಸಾರ್ವಕಾಲಿಕ ಸತ್ಯ. ನಿರ್ದೇಶಕರಾಗಲಿ ಅಥವಾ ನಿರ್ಮಾಪಕರಾಗಲಿ ಸ್ವಲ್ಪ ಬಣ್ಣ, ತೂಕ ಮತ್ತು ನೋಟಕ್ಕೆ ಮಹತ್ವ ನೀಡುತ್ತಾರೆ. ಇದರಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರು ಕೂಡ ಅವರನ್ನು ತಿರಸ್ಕರಿಸುತ್ತಾರೆ. ಕಪ್ಪು ಬಣ್ಣ ಹೊಂದಿರುವ ನಾಯಕಿಯರು ಇಂತಹ ಅನೇಕ ಕಹಿ ಅನುಭವಗಳನ್ನು ಎದುರಿಸಿದ್ದಾರೆ. ಅವರಲ್ಲಿ ನಟಿ ಈಶಾ ರೆಬ್ಬಾ ಕೂಡ ಒಬ್ಬರು ಎನ್ನಬಹುದು.
ತರುಣ್ ಭಾಸ್ಕರ್ ಜತೆ ನಟಿಸಿರುವ ತನ್ನ ಇತ್ತೀಚಿನ 'ಓಂ ಶಾಂತಿ ಶಾಂತಿ' ಚಿತ್ರದ ಪ್ರಚಾರದ ಭಾಗವಾಗಿ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗಿಯಾಗಿ ಈಶಾ ಮಾತನಾಡಿದರು. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಚಿತ್ರವೊಂದಕ್ಕಾಗಿ ಫೋಟೋಶೂಟ್ ಮಾಡುತ್ತಿದ್ದಾಗ, ಒಬ್ಬ ಸ್ಟಾರ್ ನಿರ್ದೇಶಕ ವರ್ತಿಸಿದ ರೀತಿ ನನಗೆ ಆಘಾತವನ್ನುಂಟು ಮಾಡಿತು ಎಂದಿದ್ದಾರೆ.
ಆ ಸ್ಟಾರ್​ ನಿರ್ದೇಶಕ, ನನ್ನ ಫೋಟೋಗಳನ್ನು ಇಂಚಿಂಚಾಗಿ ಜೂಮ್ ಮಾಡಿ ನೋಡಿದರು. ನಿನ್ನ ಮುಖ, ಮೊಣಕೈಗಳು ಕಪ್ಪಾಗಿವೆ, ನೀನು ಬೆಳ್ಳಗೆ ಆಗಬೇಕು ಎಂದು ಹೇಳಿದರು. ಆ ಮಾತುಗಳನ್ನು ಕೇಳಿ, ನಾನು ತುಂಬಾ ಅಳುತ್ತಿದ್ದೆ. ನಾನು ಸ್ವಲ್ಪ ಬೆಳ್ಳಗಾದರೂ ಹುಟ್ಟಬೇಕಿತ್ತು ಅಂತ ಅನಿಸಿತು ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.
ಅವಕಾಶಗಳು ಸಿಗಬೇಕಾದರೆ ನೀವು ತೆಲುಗು ಹುಡುಗಿಯಂತೆ ನಟಿಸಬೇಡಿ. ಅಲ್ಲದೆ, ಯಾವುದೇ ಪಾರ್ಟಿಗಳಿಗೆ ಕರೆದರೆ, ನೀವು ಹೋಗಬೇಕೆಂದು ಕೆಲವರು ಸಲಹೆ ನೀಡುತ್ತಿದ್ದರು ಎಂದು ಇದೇ ಸಂದರ್ಭದಲ್ಲಿ ಈಶಾ ರೆಬ್ಬಾ ಬಹಿರಂಗಪಡಿಸಿದರು. ಅಲ್ಲದೆ, ನನ್ನ ತಾಯಿ ತೀರಿಕೊಂಡ 12ನೇ ದಿನಕ್ಕೆ ನಾನು ಶೂಟಿಂಗ್‌ಗೆ ಹೋಗಬೇಕಾಯಿತು. ಸಿನಿಮಾ ರಂಗದಲ್ಲಿ ಬೆಂಬಲವಾಗಿ ನಿಲ್ಲಲು ಯಾರೂ ಇಲ್ಲದೇ ಹೋದರೆ, ಅಂತಹ ಹುಡುಗಿಯರನ್ನು ಎಲ್ಲರೂ ಗುರಿಯಾಗಿಸಿಕೊಳ್ಳುತ್ತಾರೆ ಎಂಬ ಶಾಕಿಂಗ್​ ಹೇಳಿಕೆಯನ್ನು ನೀಡಿದರು. ಪ್ರಸ್ತುತ, ಈಶಾ ರೆಬ್ಬಾ ಮಾಡಿದ ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, (ಏಜೆನ್ಸೀಸ್​).