ಧಾರಾವಾಹಿ ನಟಿ ( Serial Actress ) ಸಮೀರಾ ಷರೀಫ್
- ಲೈಂಗಿಕ ದೌರ್ಜನ್ಯ ತಡೆಯಲು ಪೋಕ್ಸೋ ಸೇರಿದಂತೆ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ
- ಕಾನೂನಿನ ತಿಳುವಳಿಕೆಗೂ ಮುನ್ನ ಚಿಕ್ಕ ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸಬೇಕು
- ಟಾಲಿವುಡ್ ಧಾರಾವಾಹಿ ನಟಿ ಸಮೀರಾ ಷರೀಫ್ ಹೇಳಿಕೆ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಯುವತಿಯರು ಹಾಗೂ ಮಹಿಳೆಯರ ಮೇಲೆ ಮಾತ್ರವಲ್ಲ, ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಅವುಗಳನ್ನು ತಡೆಯಲೆಂದೇ ಪೋಕ್ಸೋ ಸೇರಿದಂತೆ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ, ಕಾನೂನಿನ ತಿಳುವಳಿಕೆಗೂ ಮುನ್ನ ಚಿಕ್ಕ ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ ಏನು ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಟಾಲಿವುಡ್ ಧಾರಾವಾಹಿ ನಟಿ ( Serial Actress ) ಸಮೀರಾ ಷರೀಫ್ ಹೇಳುತ್ತಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸಮೀರಾ, ತಾವು ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಿದರು. ನಾನು ಬಾಲಕಿಯಾಗಿದ್ದಾಗ ಒಬ್ಬ ವ್ಯಕ್ತಿ ನನ್ನೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು. ಆ ಸಮಯದಲ್ಲಿ ಏನೆಂದು ತಿಳಿಯಲಿಲ್ಲ ಆದರೆ, ಆನಂತರ ನನಗೆ ಅರ್ಥವಾಯಿತು ಎಂದು ಸಮೀರಾ ಹೇಳಿದರು.
ನಾನು ಚಿಕ್ಕವಳಾಗಿದ್ದಾಗ ನಮ್ಮ ಕುಟುಂಬ ರೈಲ್ವೆ ಕ್ವಾಟ್ರಸ್ನಲ್ಲಿ ವಾಸವಿತ್ತು. ಆಗ ನಮ್ಮ ಎದುರಿಗೆ ಇದ್ದ ನಮ್ಮ ಚಿಕ್ಕಮ್ಮನ ಮನೆಗೆ ಸಂಬಂಧಿಕರು ಬರುತ್ತಿದ್ದರು. ಅವರಲ್ಲಿ ಓರ್ವ ಅಂಕಲ್, ನನ್ನ ಕೆನ್ನೆಗಳಿಗೆ ಮುತ್ತಿಡುತ್ತಿದ್ದರು. ಆ ಸಮಯದಲ್ಲಿ ನನಗೆ ಅದು ಏನೆಂದು ಅರ್ಥವಾಗಲಿಲ್ಲ. ಅಲ್ಲದೆ, ಎಲ್ಲಾ ಮಕ್ಕಳು ಒಟ್ಟಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದರು. ಆ ಅಂಕಲ್ ಕೂಡ ನಮ್ಮ ಜೊತೆಗೂಡುತ್ತಿದ್ದರು ಎಂದು ಸಮೀರಾ ಹೇಳಿದ್ದಾರೆ.
ನಾವು ಅಡಗಿಕೊಳ್ಳಲು ಟೆರೇಸ್ ಹತ್ತುತ್ತಿದ್ದೆವು. ಅಲ್ಲಿಗೆ ಯಾರೂ ಬರುತ್ತಿರಲಿಲ್ಲ. ಹೀಗಾಗಿ, ಆತ ನನ್ನನ್ನು ಅಲ್ಲಿಗೆ ಕರೆದೊಯ್ದು ಮುತ್ತಿಡುತ್ತಿದ್ದನು. ಇದು ಹಲವು ಬಾರಿ ನಡೆದಾಗ ನನಗೆ ವಿಚಿತ್ರವೆನಿಸಿತು. ಆ ಸಮಯದಲ್ಲಿ ಅದು ಕೇವಲ ಮುತ್ತು ತಾನೇ ಎಂದು ನಾನು ಭಾವಿಸಿದೆ. ಆದರೆ, ಆನಂತರ ಆತ ತನ್ನ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾನೆ ಅನ್ನೋದು ನನಗೆ ಅರ್ಥವಾಯಿತು ಎಂದು ಸಮೀರಾ ತಿಳಿಸಿದರು.
ಚಿಕ್ಕ ಮಕ್ಕಳಿಗೆ ಇದೆಲ್ಲ ತಿಳಿಯುವುದಿಲ್ಲ. ಅದಕ್ಕಾಗಿಯೇ ಹಿರಿಯರು, ತಮ್ಮ ಮಕ್ಕಳಿಗೆ ಈ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ವಿವರವಾಗಿ ತಿಳಿಸಬೇಕು. ಅವರಿಗೆ ಅರಿವು ಮೂಡಿಸಬೇಕು. ಯಾವುದೇ ಸಮಸ್ಯೆಗಳು ಎದುರಾದಲ್ಲಿ ಅವರಿಗೆ ಸಹಾಯ ಮಾಡಲು ಮತ್ತು ಬೆಂಬಲಿಸಲು ನಾವು ನಿನ್ನ ಜತೆಗಿದ್ದೇವೆ ಎಂದು ಭರವಸೆ ನೀಡಬೇಕು ಎಂದು ಸಮೀರಾ ಷರೀಫ್ ವಿವರಿಸಿದರು.
ಇದೀಗ ಸಮೀರಾ ಷರೀಫ್ ಅವರು ಮಾಡಿರುವ ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, (ಏಜೆನ್ಸೀಸ್).