ಚಿತ್ರ Instagram 
ಟಾಲಿವುಡ್

"ಅವನು ಯಾವುದಕ್ಕೂ ಹೆದರುವವನಲ್ಲ": 'ಜನ ನಾಯಗನ್' ವಿಳಂಬದ ಬಗ್ಗೆ ಮೌನ ಮುರಿದ ತಂದೆ ಎಸ್‌ಎ ಚಂದ್ರಶೇಖರ್! S A Chandrasekhar

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಸುತ್ತಲಿನ ವಿವಾದಗಳು ಮತ್ತು ಅವರ ರಾಜಕೀಯ ಪ್ರವೇಶದ ಬಗ್ಗೆ ಅವರ ತಂದೆ, ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ (S A Chandrasekhar) ನೀಡಿರುವ ಹೇಳಿಕೆಗಳು ಭಾರೀ ಸಂಚಲನ ಮೂಡಿಸಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರೂರಿನಲ್ಲಿ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ವಿಜಯ್​ ಯಾವುದಕ್ಕೂ ಅಂಜುವುದಿಲ್ಲ. ಚಿತ್ರದ ಬಿಡುಗಡೆಗೂ ಮುನ್ನ ಬಂದಂತಹ ಬೆದರಿಕೆಗಳು, ಅಥವಾ ಅಡೆತಡೆಗಳು ಅವನನ್ನು ಕುಗ್ಗಿಸುವುದಿಲ್ಲ. ಅವನು ನಂಬಿದ ಹಾದಿಯಲ್ಲಿ ಧೈರ್ಯವಾಗಿ ಮುನ್ನುಗ್ಗುತ್ತಾನೆ ಎಂದು ಹೇಳಿದ್ದಾರೆ.
ಆದಾಗ್ಯೂ, ಮೊದಲ ಬಾರಿಗೆ ರಾಜಕೀಯಕ್ಕೆ ಪ್ರವೇಶಿಸಿದವರು ಅಡತಡೆಗಳನ್ನು ಎದುರಿಸುವುದು ಸಹಜ. ಅದೇ ರೀತಿ ವಿಜಯ್​ ಕೂಡಾ ಅಂತಹ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ಸನ್ನಿವೇಶಗಳು ಅವರಿಗೆ ರಾಜಕೀಯ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಅಭಿಪ್ರಾಯ ಸೂಚಿಸಿದರು.
ವಿಜಯ್ ಅವರ ರಾಜಕೀಯ ಪ್ರವೇಶದಿಂದ ಉಂಟಾದ ದೊಡ್ಡ ಸಾಂಸ್ಕೃತಿಕ ಬದಲಾವಣೆಯ ಬಗ್ಗೆ ಮಾತನಾಡಿದ ಅವರು, ವಿಜಯ್​ ರಾಜಕೀಯಕ್ಕೆ ಪ್ರವೇಶಿಸಿದ ನಂತರ, ಯುವಕರು ಮತ್ತು ಮಹಿಳೆಯರು ರಾಜಕೀಯದ ಬಗ್ಗೆ ಒಲವನ್ನು ತೋರಿಸುತ್ತಿದ್ದಾರೆ. ವಿಜಯ್​ ನನಗಿಂತ ಸ್ಪಷ್ಟವಾಗಿ ಮಾತನಾಡುತ್ತಾರೆ ಎಂದು ಹೇಳಿದರು.

ಜನ ನಾಯಕನ ಬಿಡುಗಡೆ ಮುಂದೂಡಿಕೆ

ಜನವರಿ 28 ರಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ ಪ್ರಕಾರ, ಚಿತ್ರದ ಕಥೆಯಲ್ಲಿ ಭಾರತದೊಳಗೆ ಸಂಘರ್ಷವನ್ನು ಸೃಷ್ಟಿಸುತ್ತಿರುವ ವಿದೇಶಿ ಶಕ್ತಿಗಳ ಉಲ್ಲೇಖಗಳಿವೆ. ಇದು ರಾಷ್ಟ್ರೀಯ ಭದ್ರತೆಗೆ ಸೂಕ್ಷ್ಮವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆದಾಗ್ಯೂ, ಚಿತ್ರದಲ್ಲಿನ ಕೆಲವು ದೃಶ್ಯಗಳು ಅಥವಾ ಸಂಭಾಷಣೆಗಳು ಕೇವಲ ಸೇನೆಗೆ ಸಂಬಂಧಿಸಿದ ವಿಷಯಗಳಲ್ಲದೆ, ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಕೋಮು ಸಾಮರಸ್ಯವನ್ನು ಹರಡುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಆತಂಕ ಹೊರಹಾಕಿದ್ದಾರೆ.
ಹಾಗಾಗಿ ಚಿತ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಬಿಡುವ ಮುನ್ನ, ಈ ವಿವಾದಾತ್ಮಕ ಅಂಶಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಮತ್ತು ಅಗತ್ಯವಿದ್ದರೆ ಅವುಗಳನ್ನು ತೆಗೆದುಹಾಕಬೇಕು ಎಂದು ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ (ಏಜೆನ್ಸೀಸ್​).