- ವಿಡಿಯೋ ಗ್ಲಿಂಪ್ಸ್ ಅಲಿಖಿತ ನಿಯಮ ಬ್ರೇಕ್ ಮಾಡಿದ ಡ್ರ್ಯಾಗನ್ ಸಿನಿಮಾ
- 4.29 ನಿಮಿಷದ ಸಿನಿಮಾ ಗ್ಲಿಂಪ್ಸ್ ರಿಲೀಸ್
- ಗ್ಲಿಂಪ್ಸ್ ಹೀಗೆ, ಇನ್ನು ಟ್ರೇಲರ್ ಇನ್ನು ಹೇಗಿರುತ್ತೇ ಎಂದು ಅಚ್ಚರಿ ವ್ಯಕ್ತಪಡಿಸಿದ ಪ್ರೇಕ್ಷಕರು
ಸಾಮಾನ್ಯವಾಗಿ ಸಿನಿಮಾಗಳ ಗ್ಲಿಂಪ್ಸ್, ಪಾತ್ರ ಪರಿಚಯಿಸುವ ವಿಡಿಯೋಗಳು ಒಂದು-ಒಂದೂವರೆ ನಿಮಿಷ ಇರುತ್ತವೆ. ಅಷ್ಟರಲ್ಲಿಯೇ ಒಂದು ಸಣ್ಣ ಝಲಕ್ ನೀಡಿ, ಚಿತ್ರತಂಡಗಳು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುವ ಪ್ರಯತ್ನ ಮಾಡುತ್ತವೆ. ಇದೀಗ ಗ್ಲಿಂಪ್ಸ್ ಎಂದರೆ ಕಡಿಮೆ ಅವಧಿಯಲ್ಲಿ ಇರಬೇಕು ಎಂಬ ಅಲಿಖಿತ ನಿಯಮವನ್ನು ತೆಲುಗಿನ ‘ಡ್ರ್ಯಾಗನ್’ ಚಿತ್ರ ಬ್ರೇಕ್ ಮಾಡಿದೆ. ಚಿತ್ರತಂಡ ರಿಲೀಸ್ ಮಾಡಿರುವ ಗ್ಲಿಂಪ್ಸ್ ಅವಧಿಯೇ 4.29 ನಿಮಿಷ ಇದ್ದು, ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ತೆಲುಗು ನಟ ಜೂ.ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರವಿದು. ಬುಧವಾರ (ಮೇ 20) ಜೂ.ಎನ್‌ಟಿಆರ್ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ‘ಡ್ರ್ಯಾಗನ್’ ತಂಡ ಮಂಗಳವಾರ (ಮೇ 19) ರಾತ್ರಿ 11.52ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಗ್ಲಿಂಪ್ಸ್ ರಿಲೀಸ್ ಮಾಡಿ, ಬರ್ತ್‌ಡೇ ಗ್‌ಟಿ ನೀಡಿದೆ. ಹಲವು ವಿಶೇಷತೆಗಳಿಂದ ಕೂಡಿರುವ ಈ ವಿಡಿಯೋ ಗ್ಲಿಂಪ್ಸ್ ತಾಂತ್ರಿಕ ಗುಣಮಟ್ಟದ ಜತೆಗೆ ಪಾತ್ರಗಳು, ನಿರೂಪಣೆ ಮತ್ತು ಹಿನ್ನೆಲೆ ಸಂಗೀತದ ಮೂಲಕ ಗಮನ ಸೆಳೆಯುತ್ತಿದೆ. ಹೀಗಾಗಿಯೇ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದು ಐದು ಭಾಷೆಗಳಿಂದ ಮೂರು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. 2027ರ ಜೂನ್ 11ಕ್ಕೆ ‘ಡ್ರ್ಯಾಗನ್’ ವಿಶ್ವಾದ್ಯಂತ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. -ಏಜೆನ್ಸೀಸ್
ಜಾಗತಿಕ ಕಥೆ, ಅದ್ಧೂರಿ ಮೇಕಿಂಗ್
‘ಡ್ರ್ಯಾಗನ್’ ಗ್ಲಿಂಪ್ಸ್ ಗ್ಯಾಂಗ್‌ಸ್ಟರ್‌ಗಳ ಕದನದ ಜತೆಗೆ ಇತಿಹಾಸವನ್ನು ಕೆದಕಿದೆ. 250 ವರ್ಷಗಳ ಕಾಲ ಭಾರತವನ್ನು ಆಳಿದ್ದ ಬ್ರಿಟಿಷರು ದೇಶವನ್ನು ಬಿಟ್ಟು ಹೋದ ಬಳಿಕ ಮಾದಕ ವಸ್ತು ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಹಿಡಿತ ಸಾಧಿಸಲು ಎರಡು ಬಣಗಳ ನಡುವಿನ ಕದನದ ಮೇಲೆ ಈ ವಿಡಿಯೋ ಝಲಕ್ ಬೆಳಕು ಚೆಲ್ಲಿದೆ. ಅಫೀಮು ವ್ಯಾಪಾರದ ಹಿಡಿತಕ್ಕಾಗಿ ಅಫ್ಘಾನ್ ಮತ್ತು ಗೋಲ್ಡನ್ ಟ್ರೇಡಿಂಗ್ ಕಂಪನಿಗಳು ಕದನಕ್ಕಿಳಿದಿವೆ. ಈ ಬಣಗಳ ಒಬ್ಬೊಬ್ಬ ಮುಖ್ಯಸ್ಥನನ್ನು ರುಕ್ಮಿಣಿ ವಸಂತ್ ಪರಿಚಯಿಸಿದ್ದಾರೆ. ಅದರಲ್ಲಿ ಭಯಾನಕ ಇತಿಹಾಸ ಇರುವ ಅಫ್ಘಾನ್ ಟ್ರೇಡಿಂಗ್ ಕಂಪನಿಯ ನಾಯಕನೇ ‘ಲೂಗರ್’ (ಜೂ. ಎನ್‌ಟಿಆರ್). ಕೆಲವೇ ದೃಶ್ಯಗಳಲ್ಲಿದ್ದರೂ ಜೂ.ಎನ್‌ಟಿಆರ್ ರಕ್ತಸಿಕ್ತ ಹಾಗೂ ಖಡಕ್ ಡೈಲಾಗ್ ಮೂಲಕ ಗಮನ ಸೆಳೆದಿದ್ದಾರೆ. ‘ಕನಸಿನಲ್ಲಿ ನಾನು ಕೊಂದಿರುವವವರ ಮುಖ ನನಗೆ ಕಾಣಲ್ಲ. ಮಿಕ್ಕವರ ಮುಖ ಕಾಣುತ್ತೇ. ದಾರಿ ತಪ್ಪಿನೂ ನನ್ನ ಕನಸಲ್ಲಿ ಬರಬೇಡ’ ಎಂಬ ಮಾಸ್ ಡೈಲಾಗ್ ಮೂಲಕ ಜೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಇದು 1967ರ ಕಥೆಯಾಗಿದ್ದು, ಮೇಕಿಂಗ್‌ನಲ್ಲಿ ‘ಕೆಜಿಎಫ್’ ಸರಣಿ, ‘ಸಲಾರ್’ ಛಾಯೆ ಕಂಡರೂ, ಪ್ರಶಾಂತ್ ನೀಲ್ ವಿಭಿನ್ನ ಕಥೆ ಆಯ್ದುಕೊಂಡಿದ್ದಾರೆ. ಹಿಂದಿನ ಸಿನಿಮಾಗಳಂತೆ ಗಾಢ ಕತ್ತಲೆ, ಬೆಳಕು ಕಾಣಬಹುದಾಗಿದೆ.
ಬಹು ತಾರಾಗಣ
‘ಡ್ರ್ಯಾಗನ್’ ಚಿತ್ರದಲ್ಲಿ ದಕ್ಷಿಣ ಹಾಗೂ ಉತ್ತರ ಭಾರತ ಸೇರಿ ಹಾಲಿವುಡ್ ಕಲಾವಿದರ ಸಂಗಮವಾಗಿದೆ. ಜೂ.ಎನ್‌ಟಿಆರ್ ಜತೆ ರುಕ್ಮಿಣಿ ವಸಂತ್, ಅನಿಲ್ ಕಪೂರ್, ಬಿಜು ಮೆನನ್, ಗುರು ಸೋಮುಸುಂದರಂ, ಅಶುತೋಷ್ ರಾಣಾ, ಬಿಮಲ್ ಓಬೆರಾಯ್, ಹಾಲಿವುಡ್‌ನ ಎನ್‌ಟಾತುಜೆಲೋ, ಪ್ರಿನ್ಸ್ ಗ್ರೂಟ್‌ಬ್ರೂಮ್, ಅಲೆಕ್ಸಾಂಡರ್ ಮಿಜೆವ್, ಬೆನೆಡಿಕ್ಟ್ ಪೌಲ್ ಅಭಿನಯಿಸುತ್ತಿದ್ದಾರೆ.