ಪೃಥ್ವಿರಾಜ್​ ಸುಕುಮಾರನ್​  
ಟಾಲಿವುಡ್

ಅವರಿಗಿಂತ ಮುಂಚೆ ನಾವು ಶುರು ಮಾಡಿದ್ದು! 'ಪುಷ್ಪ' ಜತೆ ನಮ್ಮ ಸಿನಿಮಾ ಲಿಂಕ್​ ಮಾಡಬೇಡಿ: ನಟ ಪೃಥ್ವಿರಾಜ್ ಗರಂ​

ಪ್ರಮುಖ ಮುಖ್ಯಾಂಶಗಳು

  • ಪೃಥ್ವಿರಾಜ್ ಸುಕುಮಾರನ್ ಮುಂಬರುವ ಚಿತ್ರ ವಿಲಾಯತ್ ಬುದ್ಧ
  • ಪುಷ್ಪ ಚಿತ್ರದ ಕಥೆಯನ್ನೇ ಕದ್ದಿದ್ದಾರೆ?
  • ಟೀಕೆಗಳಿಗೆ ಸುಕುಮಾರನ್​ ತಿರುಗೇಟು
ಕೇರಳ: ಮಾಲಿವುಡ್​ ಸ್ಟಾರ್ ಹೀರೋ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ಇತ್ತೀಚಿನ ಚಿತ್ರ 'ವಿಲಾಯತ್ ಬುದ್ಧ' ಬಗ್ಗೆ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ.  
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಪ್ರಚಾರ ಕಾರ್ಯಗಳು ಜೋರಾಗಿದ್ದು, ಬಿಡುಗಡೆಯಾದ ಟ್ರೇಲರ್‌ ಕೆಲವರಲ್ಲಿ ಗೊಂದಲ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಪೃಥ್ವಿರಾಜ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ರಕ್ತ ಚಂದನದ ಕಳ್ಳಸಾಗಣೆಯ ಕಥೆಯನ್ನೇ ಈ ಚಿತ್ರವು ಒಳಗೊಂಡಿರುವುದು ಸದ್ಯ ಟೀಕೆಗಳಿಗೆ ಕಾರಣವಾಗಿದೆ. 
'ಡಬಲ್ ಮೋಹನ್' ಪಾತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಶೈಲಿ ಮತ್ತು ಕಥಾ ಹಿನ್ನೆಲೆಯನ್ನು ನೋಡಿದ ಬಳಿಕ, ನೆಟ್ಟಿಗರು ಚಿತ್ರವನ್ನು ಅಲ್ಲು ಅರ್ಜುನ್ ಅಭಿನಯದ ಬ್ಲಾಕ್​ಬಸ್ಟರ್​ 'ಪುಷ್ಪ'ಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಲಾಯತ್ ಬುದ್ಧ ಚಿತ್ರ ಪುಷ್ಪ ಸಿನಿಮಾದ ಕಾಪಿ ಎಂದು ಹೇಳಲಾಗುತ್ತಿದೆ. ಬ್ಯಾಕ್​ ಟು ಬ್ಯಾಕ್​ ಹೋಲಿಕೆ ಮತ್ತು ಟೀಕೆಗಳನ್ನು ಸಹಿಸದ ಸುಕುಮಾರನ್​, ಟೀಕಿಸುವವರಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. 
ಈ ಕುರಿತು ಮಾತನಾಡಿದ ಪೃಥ್ವಿರಾಜ್​, 'ಪುಷ್ಪ' ರಿಲೀಸ್​ಗೂ ಬಹಳ ಹಿಂದೆಯೇ ನಮ್ಮ ಸಿನಿಮಾ ಶುರುವಾಗಿತ್ತು. ನಾವು ಈ ಕಥೆಯನ್ನು ಸ್ವಲ್ಪ ಸಮಯದ ಹಿಂದೆಯೇ ಪ್ರಾರಂಭಿಸಿದ್ದೆವು. ಚಿತ್ರದ ಕಥೆಯು ಜಿ.ಆರ್. ಇಂದುಗೋಪಾಲನ್ ಬರೆದ 'ವಿಲಾಯತ್ ಬುದ್ಧ' ಕಾದಂಬರಿಯನ್ನು ಆಧರಿಸಿದೆ. ಕಥೆಯನ್ನು ಮೊದಲು ತನಗೆ ಹೇಳಿದ್ದು ಅಯ್ಯಪ್ಪನಮ್ ಕೋಶಿಯುಮ್ ಖ್ಯಾತಿಯ ಸಾಚಿ ಅವರು. ಆದರೆ, ಅವರ ಹಠಾತ್ ನಿಧನದಿಂದ ನಮ್ಮ ಪ್ರಾಜೆಕ್ಟ್​ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ನಮ್ಮ ಚಿತ್ರವನ್ನು ಅವರೊಂದಿಗೆ ಹೋಲಿಸಬೇಡಿ" ಎಂದು ಹೇಳಿದರು,(ಏಜೆನ್ಸೀಸ್).