ಸಲ್ಮಾನ್ ಖಾನ್- ವಂಶಿ ಪೈಡಿಪಳ್ಳಿ
- ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕೆ ವಂಶಿ ಪೈಡಿಪಳ್ಳಿ ಆ್ಯಕ್ಷನ್-ಕಟ್
- ಏಪ್ರಿಲ್ ನಿಂದ ಶೂಟಿಂಗ್ ಆರಂಭ
- ಸಲ್ಮಾನ್ ಖಾನ್ ಗೆ ನಾಯಕಿಯಾಗಿ ನಯನತಾರಾ ಆಯ್ಕೆ ಅಧಿಕೃತ
ಸಿನಿಮಾ ಕ್ಷೇತ್ರಕ್ಕೆ ಭಾಷೆ, ಗಡಿಯ ಹಂಗಿಲ್ಲ. ಕಲಾವಿದರು, ತಂತ್ರಜ್ಞರು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ವಲಸೆ ಹೋಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಹಲವು ದಕ್ಷಿಣ ಭಾರತದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಈಗಾಗಲೇ ಬಾಲಿವುಡ್‌ನಲ್ಲಿ ಕೆಲಸ ಮಾಡಿ, ಸೈ ಎನಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಮತ್ತೊಬ್ಬ ತೆಲುಗು ನಿರ್ದೇಶಕ ಬಾಲಿವುಡ್‌ಗೆ ಪಯಣ ಬೆಳೆಸಿದ್ದಾರೆ. ನಟ ಸಲ್ಮಾನ್ ಖಾನ್‌ಗೆ ಆ್ಯಕ್ಷನ್-ಕಟ್ ಹೇಳಲು ಸಿದ್ಧರಾಗಿದ್ದಾರೆ. ಹೌದು, ಎ.ಆರ್.ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಸೋಲಿನ ಬಳಿಕವೂ ಸಲ್ಮಾನ್ ಮತ್ತೆ ದಕ್ಷಿಣ ಭಾರತದ ನಿರ್ದೇಶಕನಿಗೆ ಮಣೆ ಹಾಕಿದ್ದು, ಹೊಸ ಸಿನಿಮಾ ೋಷಿಸಿದ್ದಾರೆ. ತೆಲುಗಿನ ‘‘ಬೃಂದಾವನಂ’, ‘ಮಹರ್ಷಿ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವಂಶಿ ಪೈಡಿಪಳ್ಳಿ. ಸಲ್ಮಾನ್ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸದ್ಯ ಸಲ್ಮಾನ್ ‘ಮಾತೃಭೂಮಿ’ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದು, ಸದ್ಯ ಸಿನಿಮಾ ಕೊನೆಯ ಹಂತದಲ್ಲಿದೆ. ಏಪ್ರಿಲ್‌ನಲ್ಲಿ ಸಲ್ಮಾನ್-ವಂಶಿ ಕಾಂಬಿನೇಷನ್‌ನ ಚಿತ್ರ ಸೆಟ್ಟೇರಲಿದೆ. ಈ ಹಿಂದೆ ಸಲ್ಮಾನ್, ಚಿರಂಜೀವಿ ಅಭಿನಯದ ತೆಲುಗಿನ ‘ಗಾಡ್‌ಫಾದರ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ತೆಲುಗು ನಿರ್ದೇಶಕನ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಲಿದ್ದಾರೆ. ಈ ಹೊಸ ಚಿತ್ರವು ತೆಲುಗು- ಹಿಂದಿಯಲ್ಲಿ ಮೂಡಿಬರಲಿದ್ದು, ನಾಯಕಿ ಪಾತ್ರಕ್ಕೆ ನಯನತಾರಾ ಆಯ್ಕೆಅಧಿಕೃತವಾಗಿದೆ. ಟೈಟಲ್, ತಾರಾಗಣ ಸೇರಿ ಉಳಿದೆಲ್ಲ ಮಾಹಿತಿಯ ಬಗ್ಗೆ ಇನ್ನಷ್ಟೇ ಘೋಷಣೆಯಾಗಬೇಕಿದೆ. -ಏಜೆನ್ಸೀಸ್
ತೆಲುಗು ನಿರ್ದೇಶಕರಿಗೆ ಮಣೆ
ಸಲ್ಮಾನ್ ಖಾನ್ ಮಾತ್ರವಲ್ಲ, ಬಹುತೇಕ ಬಾಲಿವುಡ್ ನಟರು ಸದ್ಯ ದಕ್ಷಿಣ ಭಾರತದ ನಿರ್ದೇಶಕರತ್ತ ಒಲವು ತೋರಿಸುತ್ತಿದ್ದಾರೆ. ನಟ ಸನ್ನಿ ಡಿಯೋಲ್ ಕಳೆದ ವರ್ಷ ಗೋಪಿಚಂದ್ ಮಲ್ಲಿನೇನಿ ಜತೆ ‘ಜಾಟ್’ ಚಿತ್ರ ಮಾಡಿ ಗೆದ್ದಿದ್ದರು. ಇದೀಗ ಅವರು ಮತ್ತೆ ಅದೇ ನಿರ್ದೇಶಕನ ಜತೆ ಕೆಲಸ ಮಾಡಲು ಆಸಕ್ತಿ ವಹಿಸಿದ್ದು, ‘ಜಾಟ್ 2’ ಘೋಷಿಸಿದ್ದಾರೆ. ಇನ್ನು ರಣಬೀರ್ ಕಪೂರ್- ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಅನಿಮಲ್’ ದೊಡ್ಡ ಯಶಸ್ಸು ಗಳಿಸಿತ್ತು. ಆ ಬಳಿಕ ಸಂದೀಪ್ ಅದರ ಸೀಕ್ವೆಲ್ ‘ಅನಿಮಲ್ ಪಾರ್ಕ್’ ಘೋಷಿಸಿದ್ದು, ರಣಬೀರ್ ಕೂಡ ಆ ಚಿತ್ರದಲ್ಲಿ ನಟಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ‘ಶೇರ್ ಷಾ’ ನಿರ್ದೇಶಿಸಿದ್ದ ವಿಷ್ಣುವರ್ಧನ್, ಕಾರ್ತಿಕ್ ಆರ್ಯನ್ ಜತೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ. ಅಲ್ಲದೇ, ಈಗಾಗಲೇ ತೆಲುಗು ಮೂಲದ ನಿರ್ದೇಶಕರಾದ ರಾಮ್‌ಗೋಪಾಲ್ ವರ್ಮಾ, ಪುರಿ ಜಗನ್ನಾಥ್ ಸೇರಿ ಹಲವರು ಬಾಲಿವುಡ್ ನಟರ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.