- ತೆಲಂಗಾಣ ಸಿಎಂ ಹೆಸರಿನ ಐಪಿಎಲ್ ಟಿಕೆಟ್‌ಗಳು ಯುವ ನಟಿಯ ಕೈಯಲ್ಲಿ
- ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದ ನಟಿ ಕುಶಿತಾ ಕಲ್ಲಪ್ಪು
- 40,000 ರೂ. ಮೌಲ್ಯದ್ದು ಎನ್ನಲಾದ ಉಚಿತ ಟಿಕೆಟ್‌ಗಳು ನಟಿಯ ಕೈಗೆ ಹೇಗೆ ಬಂತು? ಎಂಬ ಅನುಮಾನ ವ್ಯಕ್ತ
ಹೈದರಾಬಾದ್: ಮೊನ್ನೆ ಮೊನ್ನೆಯಷ್ಟೇ ಉಪ್ಪಾಳ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಎಸ್ಆರ್ಎಚ್ ತವರಿನಲ್ಲಿ ಸುಲಭ ಗೆಲುವು ಸಾಧಿಸಿತು. ಇದೇ ಪಂದ್ಯಕ್ಕೆ ಆಗಮಿಸಿದ್ದ ನಟಿ, ಮಾಡೆಲ್ ಕುಶಿತಾ ಕಲ್ಲಪ್ಪು ಇದೀಗ ನೆಟ್ಟಿಗರ ಅನುಮಾನ, ಗೊಂದಲಕ್ಕೆ ಕಾರಣವಾಗಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೆಸರಿನಲ್ಲಿ ಹಂಚಿಕೆಯಾಗಿದ್ದ 40 ಸಾವಿರ ರೂ. ಮೌಲ್ಯದ ಉಚಿತ ಐಪಿಎಲ್ ಟಿಕೆಟ್‌ಗಳು ಕುಶಿತಾ ಕಲ್ಲಪ್ಪು ಅವರ ಕೈಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಈ ವಿಷಯ ಹೊಸ ವಿವಾದಕ್ಕೂ ಕಾರಣವಾಗಿದೆ. ನಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಐಪಿ ಟಿಕೆಟ್‌ಗಳನ್ನು ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಬಗ್ಗೆ ಹಲವರಿಗೆ ಗೊತ್ತಾಗಿದೆ.
ನಟಿಯ ಕೈಯಲ್ಲಿರುವ ಟಿಕೆಟ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿಗಳಿಗೆ ಎಂದು ಪ್ರತ್ಯೇಕವಾಗಿ ಮುದ್ರಿಸಲಾದ ಟಿಕೆಟ್‌ಗಳು ಕುಶಿತಾ ಅವರ ಕೈಗೆ ಹೇಗೆ ಬಂತು? ಅಸಲಿಗೆ ಅದನ್ನು ಆಕೆಗೆ ಕೊಟ್ಟವರು? ನಟಿಗೆ ಸಿಎಂ ಅವರ ಪರಿಚಯ ಇದೆಯೇ? ಎಂಬ ಹತ್ತು ಹಲವು ಪ್ರಶ್ನೆಗಳು ನೆಟ್ಟಿಗರ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ವಿರೋಧ ಪಕ್ಷಗಳು ಸಹ ಪ್ರಶ್ನಿಸಿರುವುದು ಗಮನಾರ್ಹ.
ಉಚಿತವಾಗಿ ನೀಡಲಾದ ಈ ಐಪಿಎಲ್ ಟಿಕೆಟ್ಗಳ ಬೆಲೆ ಸುಮಾರು 40,000 ರೂ. ಮೌಲ್ಯ ಎನ್ನಲಾಗಿದೆ. ಸನ್‌ರೈಸರ್ಸ್ ಎಲೈಟ್ ಲೌಂಜ್ ಟಿಕೆಟ್‌ಗಳು ಇದಾಗಿದ್ದು, ಮುಖ್ಯಮಂತ್ರಿ ಕಚೇರಿಗೆ ಅಧಿಕೃತವಾಗಿ ನೀಡಲಾಗಿದೆ. ಹೀಗಿರುವಾಗ, ಈ ಟಿಕೆಟ್‌ಗಳು ನಟಿಯ ಬಳಿ ಹೇಗೆ ಬರಲು ಸಾಧ್ಯ? ಎಂಬ ಅನುಮಾನಗಳು ವ್ಯಕ್ತವಾಗಿದೆ. ತೆಲುಗು ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಟಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಯುವ ನಟಿ, ಈ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ಶಿಷ್ಟಾಚಾರದ ಪ್ರಕಾರ, ಸಿಎಂಗೆ ನೀಡಲಾದ ಟಿಕೆಟ್ ಅಥವಾ ಪಾಸ್‌ಗಳನ್ನು ಸಾಮಾನ್ಯವಾಗಿ ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಅನ್ವಯವಾಗುತ್ತದೆ. ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ, ರಾಜಕೀಯ ಪದಾಧಿಕಾರಿಗಳು ಅಥವಾ ಸ್ನೇಹಿತರು ವೈಯಕ್ತಿಕವಾಗಿ ಇವುಗಳನ್ನು ಬಳಸಿಕೊಳ್ಳುವಂತಿಲ್ಲ. ಈ ಹಿಂದೆ ಉಚಿತ ಟಿಕೆಟ್ಗಳ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಜಟಾಪಟಿ ನಡೆದಿತ್ತು.
ಎಚ್‌ಸಿಎ ಕಾರ್ಪೊರೇಟ್ ಬಾಕ್ಸ್‌ಗೆ ಬೀಗ ಹಾಕಿ 2025ರಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಜೊತೆಗೆ ಹೆಚ್ಚಿನ ಟಿಕೆಟ್‌ಗಳಿಗೆ ಬೇಡಿಕೆ ಇಟ್ಟಿದೆ ಎಂಬ ಆರೋಪವಿತ್ತು. ಈ ಘಟನೆಯ ತೀವ್ರತೆ ಬೆನ್ನಲ್ಲೇ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಇದಕ್ಕೆ ಬಗ್ಗೆ ವಿಜಿಲೆನ್ಸ್ ತನಿಖೆಗೆ ಆದೇಶಿಸಿದ್ದರು. ಇಷ್ಟೆಲ್ಲ ನಡೆದಿರುವಾಗ, ಯುವ ನಟಿಯ ಕೈಯಲ್ಲಿ ಸಿಎಂ ಹೆಸರಿನ ಉಚಿತ ಟಿಕೆಟ್‌ಗಳು ಕಾಣಿಸಿಕೊಂಡಿರುವುದು ಸದ್ಯ ಹಲವರ ಟೀಕೆ, ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).