ಚಿತ್ರ Instagram 
ಟಾಲಿವುಡ್

ಚಿರಂಜೀವಿ ನೀಡಿದ ಆ ಒಂದು ಹೇಳಿಕೆ ಈಗ ಅವರಿಗೆ ಮುಳುವಾಯಿತೇ? ಮೆಗಾಸ್ಟಾರ್‌ಗೆ ಸಂಕಷ್ಟ ತಂದ ಹಳೆಯ ವೀಡಿಯೋ! Megastar Chiranjeevi

ಪ್ರಮುಖ ಮುಖ್ಯಾಂಶಗಳು

  • ನಟ ಚಿರಂಜೀವಿ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯೊಂದು ಆಕ್ರೋಶಕ್ಕೆ ಕಾರಣವಾಗಿದೆ
  • ಹೈದರಾಬಾದ್ನಲ್ಲಿ​ 'ಬ್ರಹ್ಮ ಆನಂದಂ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿರಂಜೀವಿ
  • ಕುಟುಂಬದ ಪರಂಪರೆಯನ್ನು ಮುಂದುವರಿಸಲು "ಮೊಮ್ಮಗ" ಬೇಕು ಎಂಬ ಹೇಳಿಕೆಗೆ ನೆಟ್ಟಿಗರ ಆಕ್ರೋಶ
  • ನಾನು ಮನೆಯಲ್ಲಿದ್ದಾಗ, ನನ್ನ ಮೊಮ್ಮಕ್ಕಳೊಂದಿಗೆ ಇದ್ದೇನೆ ಎಂದು ನನಗೆ ಅನಿಸುವುದಿಲ್ಲ
Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರು ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬದ ಪರಂಪರೆಯನ್ನು ಮುಂದುವರಿಸಲು "ಮೊಮ್ಮಗ" ಬೇಕು ಎಂದು ಅವರು ವ್ಯಕ್ತಪಡಿಸಿದ ಆಸೆ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದೆ.

ಘಟನೆ ಏನು?

ಬ್ರಹ್ಮಾನಂದಂ ಅವರ 'ಬ್ರಹ್ಮ ಆನಂದಂ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿರಂಜೀವಿ ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾ, ನಾನು ಮನೆಯಲ್ಲಿದ್ದಾಗ, ನನ್ನ ಮೊಮ್ಮಕ್ಕಳೊಂದಿಗೆ ಇದ್ದೇನೆ ಎಂದು ನನಗೆ ಅನಿಸುವುದಿಲ್ಲ. ಬದಲಾಗಿ ಮಹಿಳಾ ಹಾಸ್ಟೆಲ್​ನಲ್ಲಿ ವಾರ್ಡನ್​ ಆಗಿದ್ದೇನೆ ಅನಿಸುತ್ತದೆ. ಏಕೆಂದರೆ, ಸುತ್ತಲೂ ಹೆಣ್ಣು ಮಕ್ಕಳೇ ಇದ್ದಾರೆ ಎಂದು ಹಾಸ್ಯದ ಧಾಟಿಯಲ್ಲಿ ತಿಳಿಸಿದರು.
ಮುಂದುವರೆದಂತೆ, ನಮ್ಮ ಪರಂಪರೆಯನ್ನು ಮುಂದುವರಿಸಲು ಈ ಬಾರಿಯಾದರೂ ಒಬ್ಬ ಗಂಡು ಮಗುವನ್ನು ಹೆತ್ತುಕೊಡಿ ಎಂದು ಆಗ್ಗಾಗ ನಾನು ರಾಮ್​ಚರಣ್​ಗೆ ಹೇಳುತ್ತಿರುತ್ತೇನೆ ಎಂದರು.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮುತ್ತಿದ್ದಂತೆಯೇ, ಬಳಕೆದಾರರು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರರು 21ನೇ ಶತಮಾನದಲ್ಲೂ 'ವಂಶೋದ್ಧಾರಕ' ಎಂದರೆ ಕೇವಲ ಗಂಡು ಮಗು ಎಂಬ ಹಳೆಯ ಕಾಲದ ಚಿಂತನೆಯನ್ನು ಚಿರಂಜೀವಿ ಹೊಂದಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಹೆಣ್ಣುಮಕ್ಕಳು ಕುಟುಂಬದ ಹೆಸರನ್ನು ಮುಂದುವರಿಸಬಲ್ಲರು, ನಿಮ್ಮ ಸೊಸೆ ಉಪಾಸನಾ ಅವರ ಕುಟುಂಬದ ಅಪೊಲೊ ಸಾಮ್ರಾಜ್ಯವೇ ಇದಕ್ಕೆ ಸಾಕ್ಷಿ ಎಂದು ನೆನಪಿಸಿದ್ದಾರೆ.
ನಟ ರಾಮ್ ಚರಣ್, ಅವರ ಪತ್ನಿ ಉಪಾಸನಾ ಶನಿವಾರ (ಜ.31) ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಮೆಗಸ್ಟಾರ್​ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪೋಸ್ಟ್​ನಲ್ಲೇನಿತ್ತು?

ಖುದ್ದಾಗಿ ಎಕ್ಸ್ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಚಿರಂಜೀವಿ, ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ, ಒಬ್ಬ ಮಗ ಮತ್ತು ಒಬ್ಬ ಮಗಳು ಜನಿಸಿದ್ದಾರೆ ಎಂದು ಹೇಳಲು ಬಹಳ ಸಂತೋಷವಾಗುತ್ತಿದೆ. ಈ ವೇಳೆ ಮಕ್ಕಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದು ಅಜ್ಜ-ಅಜ್ಜಿಯಾದ ನಮಗೆ ದೇವರ ಆಶೀರ್ವಾದ ಮತ್ತು ಅಪಾರ ಸಂತೋಷದ ಕ್ಷಣ. ಅವರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್​).