ಪ್ರಮುಖ ಮುಖ್ಯಾಂಶಗಳು
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಶನಿವಾರ (ಆ. 22) 71ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಅವರು ಚಿರ ಉತ್ಸಾಹಿಯಾಗಿ ಯುವಕರನ್ನೂ ನಾಚಿಸುವಂತಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ಬಾರಿಯ ಬರ್ತ್‌ಡೇಗೆ ನಟನ 158ನೇ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಕಳೆದ ವರ್ಷದ ಹುಟ್ಟುಹಬ್ಬಕ್ಕೆ ಬಾಬಿ ಕೊಲ್ಲಿ ಮತ್ತು ಚಿರಂಜೀವಿ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆಯಾಗಿತ್ತು. ‘ವಾಲ್ಟೇರ್ ವೀರಯ್ಯ’ ಬಳಿಕ ಈ ಜೋಡಿ ಒಂದಾಗುತ್ತಿದ್ದು, ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಚಿರು ಬರ್ತ್‌ಡೇಗೆ ವಿಶೇಷ ಟೀಸರ್ ಮೂಲಕ ಟೈಟಲ್ ಘೋಷಣೆ ಮಾಡಲಾಗಿದೆ. ಚಿತ್ರಕ್ಕೆ ‘ಕಾಕಾ’ ಎಂದು ಹೆಸರಿಡಲಾಗಿದೆ. ಟೀಸರ್‌ನಲ್ಲಿ ‘ಐ ಲವ್ ಡ್ಯಾಡ್’ ಎಂಬ ಕೀ-ಚೈನ್ ಗಮನ ಸೆಳೆಯುತ್ತಿದ್ದು, ಹೀಗಾಗಿ ಇದೊಂದು ತಂದೆ-ಮಗಳ ಬಾಂಧವ್ಯದ ಕಥೆಯಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಟೀಸರ್‌ನಲ್ಲಿ ಚಿರಂಜೀವಿ ಲುಕ್ ಹಾಗೂ ಪಾತ್ರ ರಿವೀಲ್ ಮಾಡಿದ್ದು, ಅವರು ಕೆ. ಸತ್ಯಂ ಎಂಬ ಪಾತ್ರದಲ್ಲಿ ಗಂಭೀರ ಲುಕ್ ಜತೆಗೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಮ್ಯಾನರಿಸಂ, ಮಾಸ್ ಸಂಭಾಷಣೆ ಇಲ್ಲಿಯೂ ಮುಂದುವರಿಯಲಿದೆ. ಟೈಟಲ್ ಜತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದ್ದು, 2027ರ ಜ. 13ರಂದು ಸಿನಿಮಾ ತೆರೆಗೆ ಬರಲಿದೆ. ಇಲ್ಲಿ ನಟಿ ಅನುಸ್ವರ ರಾಜನ್, ಚಿರು ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕಾಕಾ’ ಜತೆಗೆ ಚಿರಂಜೀವಿ ‘ವಿಶ್ವಂಭರ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್