ಕಾಸ್ಟಿಂಗ್ ಕೌಚ್​ ವಿಚಾರಕ್ಕೆ ಚಿನ್ಮಯಿ ಪ್ರತಿಕ್ರಿಯೆ  
ಟಾಲಿವುಡ್

ಇಂಗ್ಲಿಷ್​ನಲ್ಲಿ 'ಕಮ್ಮಿಟ್​​ಮೆಂಟ್' ಅಂದ್ರೆ... ಕಾಸ್ಟಿಂಗ್ ಕೌಚ್​ ಬಗ್ಗೆ ಚಿರು ಹೇಳಿಕೆ; ಗಾಯಕಿ ಚಿನ್ಮಯಿ ಟ್ವೀಟ್​ ವೈರಲ್​

ಪ್ರಮುಖ ಮುಖ್ಯಾಂಶಗಳು

  • 'ಮನ ಶಂಕರ ವರಪ್ರಸಾದ್' ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಮೆಗಾಸ್ಟಾರ್ ಹೇಳಿಕೆ
  • ಕಾಸ್ಟಿಂಗ್ ಕೌಚ್ ಬಗ್ಗೆ ಚಿರಂಜೀವಿ ಆಡಿದ ಮಾತುಗಳಿಗೆ ಖಂಡನೆ
  • ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್​ ಮೂಲಕ ಕಿಡಿ ​
ಆಂಧ್ರಪ್ರದೇಶ: ಟಾಲಿವುಡ್ ಮೆಗಾಸ್ಟಾರ್ ನಟ ಚಿರಂಜೀವಿ, ತಮ್ಮ 'ಮನ ಶಂಕರ ವರಪ್ರಸಾದ್' ಚಿತ್ರದ ಸಕ್ಸಸ್​ ಮೀಟ್​ ಸಂಭ್ರಮದ ವೇಳೆ ಆಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿದೆ. ಕಾಸ್ಟಿಂಗ್ ಕೌಚ್​ ಕುರಿತಾಗಿ ನಟನ ಹೇಳಿಕೆಗಳಿಗೆ ತೆಲುಗು ಚಿತ್ರರಂಗದ ನಟಿಮಣಿಯರು ಮತ್ತು ಮಹಿಳೆಯರು ತೀವ್ರ ಕಿಡಿಕಾರಿದ್ದಾರೆ.

ವೃತ್ತಿಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ...

ಚಿತ್ರೋದ್ಯಮದಲ್ಲಿ 'ಕಾಸ್ಟಿಂಗ್ ಕೌಚ್' ಎಂಬುದೇ ಇಲ್ಲ ಮತ್ತು ಉದ್ಯಮವು ಕನ್ನಡಿಯಂತಿದೆ ಎಂದ ಚಿರಂಜೀವಿ, "‘ಈ ವಿಷಯಕ್ಕೆ ಅಥವಾ ಇದಕ್ಕೆ ಸಂಬಂಧಿಸಿದಂತ ಘಟನೆಗಳು ನಡೆದಿರಬಹುದು. ಆದರೆ, ಒಂದು ಅರ್ಥ ಮಾಡಿಕೊಳ್ಳಿ. ನೀವು ವೃತ್ತಿಪರವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಇನ್ನೊಬ್ಬ ವ್ಯಕ್ತಿ ಕೂಡ ಅದಕ್ಕೆ ತಕ್ಕಂತೆಯೇ ನಿಮ್ಮೊಂದಿಗೆ ನಡೆದುಕೊಳ್ಳುತ್ತಾರೆ. ಇದನ್ನು ನೆನಪಿನಲ್ಲಿಡಬೇಕು. ನೀವು ನಿಮ್ಮ ತತ್ವ-ಸಿದ್ಧಾಂತಗಳಲ್ಲಿ ದೃಢವಾಗಿದ್ದರೆ, ಯಾರೂ ನಿಮ್ಮನ್ನು ಲಾಭವಾಗಿ ಬಳಸಿಕೊಳ್ಳಲು ಪ್ರಯತ್ನಿಸುವುದಿಲ್ಲ" ಎಂದರು.
ಚಿರು ಹೇಳಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಟೀಕಿಸಿದ್ದು, ಈ ರೀತಿಯ ಹೇಳಿಕೆ ಎಷ್ಟು ಸರಿ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಗಾಯಕಿ ಚಿನ್ಮಯಿ ಶ್ರೀಪಾದ ದೊಡ್ಡ ಪೋಸ್ಟ್​ ಮೂಲಕ ನಟನ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಪರೋಕ್ಷವಾಗಿ ನಟ ಚಿರಂಜೀವಿಯನ್ನು ಗೌರವಿಸುತ್ತಾ, ಸಿನಿ ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಕರಾಳ ಮುಖಗಳ ಬಗ್ಗೆ ಟ್ವೀಟ್​ನಲ್ಲಿ ಉಲ್ಲೇಖಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
"ಇಂದು ಕಾಸ್ಟಿಂಗ್ ಕೌಚ್ ದೊಡ್ಡದಾಗಿ ಹರಡಿದೆ. ಮಹಿಳೆಯರು ಫುಲ್​ ಕಮ್ಮಿಟ್​ಮೆಂಟ್​ ನೀಡದಿದ್ದರೆ ಅವರಿಗೆ ಪಾತ್ರಗಳನ್ನು ನಿರಾಕರಿಸಲಾಗುತ್ತದೆ. ಅಸಲಿಗೆ ಈ ಪದದ ಅರ್ಥ ಸಿನಿ ಉದ್ಯಮದಲ್ಲಿ ಸಂಪೂರ್ಣವಾಗಿ ಬೇರೆಯೇ ಇದೆ. ನೀವು ಇಂಗ್ಲಿಷ್​ನಲ್ಲಿ ಶಿಕ್ಷಣ ಪಡೆದು ಬಂದಿದ್ದರೆ, ಕಮ್ಮಿಟ್​ಮೆಂಟ್​ ಎಂದರೆ ವೃತ್ತಿಪರತೆ ಎಂಬುದನ್ನು ಅರಿತಿದ್ದೀರಿ. ಕರ್ತವ್ಯದಲ್ಲಿ ಇದನ್ನು ತೋರುವುದು ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ಅಕ್ಷರಶಃ ತಪ್ಪು" ಎಂದಿದ್ದಾರೆ.
"ಸಿನಿಮಾ ಉದ್ಯಮದಲ್ಲಿ, ಈ ಪದಕ್ಕೆ ಸಂಪೂರ್ಣವಾಗಿ ವಿಭಿನ್ನ ಅರ್ಥವಿದೆ. ನಟಿಯರು ತಮ್ಮ ದೇಹವನ್ನು ತ್ಯಾಗ ಮಾಡದಿದ್ದರೆ, ಇಲ್ಲಿ ಯಾವುದೇ ಅವಕಾಶಗಳು ಸಿಗೋದಿಲ್ಲ. ಪುರುಷರು ಮಹಿಳೆಯರಿಂದ ಲೈಂಗಿಕ ಅನುಕೂಲಗಳನ್ನು ನಿರೀಕ್ಷಿಸುವುದು ಸಾಮಾನ್ಯ. ಚಿರಂಜೀವಿಯವರ ಪೀಳಿಗೆ ಬೇರೆಯಾಗಿತ್ತು, ಮತ್ತು ಆಗ ನಟರ ನಡುವೆ ಗೌರವಯುತ ಸಂಬಂಧಗಳಿದ್ದವು. ಆದರೆ, ಇಂದಿನ ಪರಿಸ್ಥಿತಿಗಳು ಆ ರೀತಿ ಇಲ್ಲ. ಬದಲಿಗೆ ಸಂಪೂರ್ಣವಾಗಿ ಹದಗೆಟ್ಟಿದೆ" ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡುತ್ತಾ, ಕಾಸ್ಟಿಂಗ್ ಕೌಚ್​ ಕುರಿತು ಕೆಲವು ನಿದರ್ಶನಗಳನ್ನು ಚಿನ್ಮಯಿ ವಿವರವಾಗಿ ಬರೆದುಕೊಂಡು, ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. ಸದ್ಯ ಚಿರಂಜೀವಿ ನೀಡಿರುವ ಹೇಳಿಕೆ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).