ನಟಿ ಅನಸೂಯಾಗಾಗೇ ಇನ್ಸ್ಟಾ ಖಾತೆ ತೆರೆದಿದ್ದ ಚಾಂಟಿಗೆ ಚಾಟಿ ಬೀಸಿದ ಸೈಬರ್ ಕ್ರೈಮ್ ಪೊಲೀಸರು! Anasuya Bharadwaj
- ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯಾ ಭಾರದ್ವಾಜ್ ವಿರುದ್ಧ ಅಶ್ಲೀಲ ಪೋಸ್ಟ್
- ಕೊನೆಗೂ ಆರೋಪಿಯನ್ನು ಬಂಧಿಸಿದ ಹೈದರಾಬಾದ್ನ ಸೈಬರ್ ಕ್ರೈಮ್ ಪೊಲೀಸರು
- ಬಂಧಿತ ಆರೋಪಿ ಚಾಂಟಿ ನಲ್ಗೊಂಡ ಜಿಲ್ಲೆಯ ಅಲ್ವಾಲ್ ಮೂಲದ ನಿವಾಸಿ
- ಇನ್‌ಸ್ಟಾಗ್ರಾಮ್‌ನಲ್ಲಿ ಚಾಂಟಿಧೋರಪಲ್ಲಿ ಹೆಸರಿನಲ್ಲಿ ಖಾತೆ ತೆರೆದು ಅನಸೂಯಾರನ್ನು ಟಾರ್ಗೆಟ್ ಮಾಡಿದ್ದ
Anasuya Bharadwaj : ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯಾ ಭಾರದ್ವಾಜ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದ ವ್ಯಕ್ತಿಯನ್ನು ಹೈದರಾಬಾದ್ನ ಸೈಬರ್ ಕ್ರೈಮ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಾಂಟಿ ಎಂದು ಗುರುತಿಸಲಾಗಿದೆ. ಈತ ನಲ್ಗೊಂಡ ಜಿಲ್ಲೆಯ ಅಲ್ವಾಲ್ ಮೂಲದ ನಿವಾಸಿ. ಕಳೆದ ವರ್ಷ ಡಿಸೆಂಬರ್ 23 ರಿಂದ ಆರೋಪಿ ಚಾಂಟಿ, ಇನ್‌ಸ್ಟಾಗ್ರಾಮ್‌ನಲ್ಲಿ ಚಾಂಟಿಧೋರಪಲ್ಲಿ (@chantidhorapally) ಹೆಸರಿನಲ್ಲಿ ಖಾತೆ ತೆರೆದು ಅನಸೂಯಾ ಅವರನ್ನು ಟಾರ್ಗೆಟ್ ಮಾಡಿಕೊಂಡಿದ್ದ.
ಅನಸೂಯಾ ವ್ಯಕ್ತಿತ್ವವನ್ನು ಕೆಣಕುವ ಮತ್ತು ಅವರ ಘನತೆಗೆ ಧಕ್ಕೆ ಬರುವಂತಹ ಆಕ್ಷೇಪಾರ್ಹ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದ. ಇದು ಎಲ್ಲೆ ಮೀರಿದಾಗ, ಆಕ್ರೋಶಗೊಂಡ ಅನಸೂಯಾ, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿ, ತನಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಅನಸೂಯ ಅವರು ನೀಡಿದ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಇನ್‌ಸ್ಟಾಗ್ರಾಮ್ ಖಾತೆಯನ್ನು ಪತ್ತೆಹಚ್ಚಿದರು. ತನಿಖೆಯ ಸಮಯದಲ್ಲಿ, ಆ ವ್ಯಕ್ತಿ ನಲ್ಗೊಂಡ ಜಿಲ್ಲೆಯ ಚಾಂಟಿ ಎಂದು ತಿಳಿದುಬಂದಿತು. ತಕ್ಷಣ ಆತನನ್ನು ವಶಕ್ಕೆ ಪಡೆಯಲಾಯಿತು. ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಕ್ಕಾಗಿ ಚಾಂಟಿ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಘಟನೆಯ ಬೆನ್ನಲ್ಲೇ ಪೊಲೀಸರು ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಯಾರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕವಾಗಿ ನಿಂದಿಸುವಂತಹ ಅಥವಾ ಅಶ್ಲೀಲ ಪೋಸ್ಟ್‌ಗಳನ್ನು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚಾಂಟಿ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 75, 79, 336 (4), 351, 356 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66ಇ ಮತ್ತು 67ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ, ಅನಸೂಯಾ ಅವರು ಟಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ. ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ನಂತರ ಆ್ಯಂಕರ್ ಆಗಿ, ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಮೂಲಕ ಸೆಲೆಬ್ರಿಟಿಯಾದರು. ಅದರಲ್ಲೂ ತಮ್ಮ ಸೌಂದರ್ಯ ಮತ್ತು ಅಭಿನಯದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಖತ್ ಆ್ಯಕ್ಟೀವ್ ಆಗಿರುವ ಅನಸೂಯಾ, ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಅಲ್ಲದೆ, ತನ್ನ ಹಾಟ್ ಡ್ರೆಸ್‌ಗಳಿಂದಲೇ ಆಗಾಗ ಟ್ರೋಲ್‌ಗೆ ಒಳಗಾಗುತ್ತಲೇ ಇರುತ್ತಾರೆ. ಆದರೆ, ಇದ್ಯಾವುದಕ್ಕೂ ಅವರು ಕ್ಯಾರೆ ಎನ್ನುವುದಿಲ್ಲ, (ಏಜೆನ್ಸೀಸ್).