'ದಿ ಪ್ಯಾರಡೈಸ್' ಸಿನಿಮಾದಲ್ಲಿ ನಟಿಸಿರುವ ನಾಯಕಿ ಕಯಾದು ಲೋಹರ್, ಪೆಡ್ಡಿ ಸಿನಿಮಾದಲ್ಲಿ ಜಾನ್ವಿ ಕಪೂರ್​ 
ಟಾಲಿವುಡ್

‘ಪೆಡ್ಡಿ’ ಬಳಿಕ ‘ಪ್ಯಾರಾಡೈಸ್’ಗೂ ಗ್ಲಾಮರ್ ಆರೋಪ; ಕಯಾದು ಲೋಹರ್ ಬಗ್ಗೆ ನೆಟ್ಟಿಗರು ಹೇಳಿದ್ದೇನು? Paradise

'ಪೆಡ್ಡಿ' ಬಳಿಕ 'ದಿ ಪ್ಯಾರಡೈಸ್' ಸಿನಿಮಾದಲ್ಲೂ ನಟಿ ಕಯಾದು ಲೋಹರ್ ಗ್ಲಾಮರ್‌ಗೆ ಮಾತ್ರ ಸೀಮಿತವಾಗಿದ್ದಾರೆಯೇ? ನಟಿಯ ಪಾತ್ರ ಹಾಗೂ ನೆಟ್ಟಿಗರ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ.

ಸಿನಿಮಾ: ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮಹಿಳೆಯರನ್ನು ಕೇವಲ ಭೋಗಿಸುವ ವಸ್ತುಗಳಂತೆ ತೋರಿಸಲಾಗುತ್ತದೆ ಎಂಬ ಆರೋಪ ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಅದು ಕೆಲ ಹಂತದಲ್ಲಿ ನಿಜವೂ ಹೌದು.

ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ, ರಾಮ್​ ಚರಣ್​ ಹಾಗೂ ಜಾನ್ವಿ ಕಪೂರ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ, ಪೆಡ್ಡಿ ಸಿನಿಮಾ ಕೂಡ ಇದೇ ಆರೋಪಕ್ಕೆ ಗುರಿಯಾಗಿತ್ತು. ಈ ಸಿನಿಮಾದಲ್ಲಿ ಜಾನ್ವಿ ಕಪೂರ್​ಳನ್ನು ಕೇವಲ ಆಕೆಯ ದೇಹ ಸೌಂದರ್ಯವನ್ನು ತೋರಿಸಲು ಬಳಸಿಕೊಳ್ಳಲಾಗಿತ್ತು ಎಂದು ಹೇಳಲಾಗಿತ್ತು.

ಈಗ, ಇದೇ ತೆರನಾದ ಆರೋಪ ನ್ಯಾಚುರಲ್​ ಸ್ಟಾರ್​ ನಾನಿ ಅಭಿನಯದ ಪ್ಯಾರಾಡೈಸ್ (Paradise)​ ಸಿನಿಮಾದ ಮೇಲೆ ಕೇಳಿ ಬರುತ್ತಿದೆ. ಈ ಸಿನಿಮಾದ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಕಯಾದು ಲೋಹಾರ್​ಳನ್ನು ಕೂಡ ಕೇವಲ ಗ್ಲಾಮರ್​ ಟಚ್​​ಗಾಗಿ ಬಳಸಲಾಗಿದೆಯೇ ಹೊರತು ಸಿನಿಮಾದಲ್ಲಿ ಇವರ ಪಾತ್ರಕ್ಕೆ ಅಷ್ಟೇನು ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ.

ಅಂಗ ಪ್ರದರ್ಶನ ಕಮ್ಮಿಯಾಗಲಿ...!

ಸಿನಿಮಾ ಕ್ಷೇತ್ರದಲ್ಲಿ ಅದರಲ್ಲೂ ತೆಲುಗು ಮತ್ತು ಬಾಲಿವುಡ್​ ಸಿನಿಮಾಗಳಲ್ಲಿ ನಟಿಯರು ಇರುವುದೇ ತಮ್ಮ ದೇಹವನ್ನು ಪ್ರೇಕ್ಷಕರಿಗೆ ತೋರಿಸಲು ಎಂಬಂತಾಗಿದ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಭಾರತವನ್ನು ನಾವು ಮಾತೃಭೂಮಿ ಎನ್ನುತ್ತೇವೆ, ನದಿಗಳಿಗೆ ಹೆಣ್ಣಿನ ಹೆಸರನ್ನೇ ಇಡುತ್ತೇವೆ, ಆದರೆ ಸಿನಿಮಾದಲ್ಲಿ ಮಾತ್ರ ನಾಯಕ ನಟಿ ಎಂದರೆ ನಾಯಕ ಹೇಳಿದಂತೆ ಕೇಳುವ, ಐಟಂ ಡಾನ್ಸ್​​ಗಳಿಗೆ ಕುಣಿಯುವುದೇ ನಟಿಯ ಕೆಲಸ ಎಂಬಂತಾಗಿದೆ ಎಂದು ಕಿಡಿ ಕಾರಿದ್ದಾರೆ.

ಈ ನಟಿಯರು ಕೂಡ, ತಾವು ಕಾಂತಿಯುತ ದೇಹವನ್ನು ಹೊಂದಿದ್ದೇವೆ, ಹೀಗಾಗಿ ಸಿನಿಮಾಗಳಲ್ಲಿ ಸುಲಭವಾಗಿ ಅವಕಾಶ ದೊರೆಯುತ್ತೆ ಎಂಬ ಮನಸ್ಥಿತಿಯಿಂದ ಆಚೆ ಬರಬೇಕು. ಹಾಗೆಯೇ ನಿರ್ದೇಶಕ, ನಿರ್ಮಾಪಕರು ತಮ್ಮ ಕತೆಗಳಿಗೆ ಹೊಂದಾಣಿಕೆಯಾಗುವ ನಟಿಯರಿಗೆ ಅವಕಾಶ ನೀಡಬೇಕು. ಸುಮ್ಮ-ಸುಮ್ಮನೆ ಐಟಂ ಹಾಡುಗಳನ್ನು ಬಳಸಬಾರದು, ದೇಹ ಸೌಂದರ್ಯಕ್ಕಿಂತ ಅಭಿನಯಕ್ಕೆ ಮನ್ನಣೆ ನೀಡಬೇಕೆಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ಯಾರಾಡೈಸ್​ ಬಗ್ಗೆ!

'ದಿ ಪ್ಯಾರಡೈಸ್' ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಶ್ರೀಕಾಂತ್​ ಒಡೆಲಾ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ಇದೊಂದು ಆಕ್ಷನ್-ಡ್ರಾಮಾ ಚಿತ್ರವಾಗಿದ್ದು, 1980ರ ದಶಕದಲ್ಲಿ ಸಾಗುವ ಈ ಕಥೆಯು, ಸಮಾಜದಲ್ಲಿ ಗುರುತಿಲ್ಲದೆ, ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ಸಂಕಷ್ಟಕ್ಕೀಡಾದ ಬುಡಕಟ್ಟು ಸಮುದಾಯದ ಬದುಕನ್ನು ಬಿಂಬಿಸುತ್ತದೆ.

ಈ ಚಿತ್ರದಲ್ಲಿ ನಾನಿ 'ಜಡಲ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಬ್ಬಾಳಿಕೆ ನಡೆಸುವ ಪ್ರಬಲ ವ್ಯಕ್ತಿಗಳ ವಿರುದ್ಧ ಸಮುದಾಯದ ಪರವಾಗಿ ಎದ್ದು ನಿಲ್ಲುವ ನಾಯಕನಾಗಿ ನಟಿಸಿದ್ದಾರೆ. ಮೋಹನ್ ಬಾಬು, ಕಯಾದು ಲೋಹರ್, ಸೋನಾಲಿ ಕುಲಕರ್ಣಿ ಮತ್ತು ರಾಘವ್ ಜುಯಲ್ ಮುಂತಾದ ದೊಡ್ಡ ತಾರಾಗಣವಿರುವ ಈ ಚಿತ್ರಕ್ಕೆ ಅನಿರ್ರುಧ್ ರವಿಚಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ, (ಏಜೆನ್ಸೀಸ್​).