Actress Keerthi Suresh - "ಮಹಾನಟಿ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಅವರು, ಇತ್ತೀಚೆಗಷ್ಟೆ ಬೆಂಗಳೂರಿಗೆ ಆಗಮಿಸಿದ್ದರು. ಫಿಯೋನಾ ರಿಫೈನ್ಡ್ ಸನ್ಫ್ಲವರ್ ಆಯಿಲ್ ಸಂಸ್ಥೆ ಆಯೋಜಿಸಿದ್ದ "ಉತ್ತಮವಾದುದನ್ನು ಆಯ್ಕೆ ಮಾಡಿ, ಉತ್ತಮ ಆಹಾರ ಸೇವಿಸಿ : ದೈನಂದಿನ ಅಡುಗೆ ಆಯ್ಕೆಗಳ ಕುರಿತ ಸಂವಾದ'ದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಕೀರ್ತಿ ಸುರೇಶ್, "ನಾನು ಆಹಾರಪ್ರಿಯೆ. ನನಗೆ ಅಡುಗೆ ತಯಾರಿಸುವುದೆಂದರೆ ತುಂಬ ಇಷ್ಟ. ಕೆಲವೊಮ್ಮೆ ಅಡುಗೆ ಮಾಡುವುದು ನನಗೆ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಒಂದು ರೀತಿ ಸ್ಟ್ರೆಸ್ ಬಸ್ಟರ್ನಂತೆ ಕೆಲಸ ಮಾಡುತ್ತದೆ. ಅದರಲ್ಲೂ ನಾನೇ ಮಾಡುವ ದೋಸೆ ಅಂದರೆ ನನಗೆ ಅಚ್ಚುಮೆಚ್ಚು. ನಾನು ಪಕ್ಕಾ ವೆಜ್. ಆದರೆ, ಪತಿ ಆ್ಯಂಟನಿ ತಟ್ಟಿಲ್ ನಾನ್&ವೆಜ್ ಪ್ರಿಯರು. ಮಾಂಸಾಹಾರ ಸೇವಿಸದ ಕಾರಣ ನನಗೆ ನಾನ್-&ವೆಜ್ ಅಡುಗೆ ಮಾಡುವುದು ಗೊತ್ತಿಲ್ಲ. ಹೀಗಾಗಿ ಆ್ಯಂಟನಿ ಫೇವರಿಟ್ ನಾನ್-ವೆಜ್ ಅಡುಗೆ ತಯಾರಿಸುವ ಪ್ರಮೇಯವೇ ಬಂದಿಲ್ಲ' ಎಂದು ನಗುತ್ತಾರೆ.
ವಿಶ್ವಾಸಾರ್ಹತೆ ಮುಖ್ಯ:
ಸಾಮಾನ್ಯವಾಗಿ ಸೆಲೆಬ್ರಿಟಿಗಳು, ಕ್ರಿಕೆಟಿಗರು ತಾವು ಪ್ರಚಾರ ಮಾಡುವ ಉತ್ಪನ್ನಗಳನ್ನು ತಾವೇ ಬಳಸುವುದಿಲ್ಲ ಎಂಬ ಆರೋಪವಿದೆ. ಆದರೆ, ಈ ವಿಷಯದಲ್ಲಿ ಕೀರ್ತಿ ಸುರೇಶ್ ಎಲ್ಲರಂತಲ್ಲ. "ನಾನು ಯಾವುದೇ ಉತ್ಪನ್ನದ ಪರ ಪ್ರಚಾರ ಮಾಡಲು ಒಪ್ಪಿಕೊಳ್ಳುವ ಮುನ್ನವೇ, ಖುದ್ದು ನಾನೇ ವೈಯಕ್ತಿಕವಾಗಿ ಅದನ್ನು ಮನೆಯಲ್ಲಿ ಬಳಸುತ್ತೇನೆ. ನಾನು ಯಾವ ಉತ್ಪನ್ನದ ಪರ ಮಾತನಾಡುತ್ತೀನೋ, ಯಾವುದರ ಬಗ್ಗೆ ಪ್ರಚಾರ ಮಾಡುತ್ತೀನೋ, ಅದನ್ನು ನಾನೇ ಬಳಸದೇ, ಬೇರೆಯವರಿಗೆ ನೀವು ಖರೀದಿಸಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅದೇ ವಿಶ್ವಾಸಾರ್ಹತೆಯನ್ನು ಜನ ನಮ್ಮಿಂದಲೂ ಬಯಸುತ್ತಾರೆ' ಎಂದು ಅಭಿಮತ ವ್ಯಕ್ತಪಡಿಸುತ್ತಾರೆ.
ಬೆಂಗಳೂರು, ಕನ್ನಡದ ನಂಟು
ಸಾಮಾನ್ಯವಾಗಿ ಮಲಯಾಳಂ ನಟ, ನಟಿಯರಿಗೆ ಕೇರಳದ ಬಳಿಕ ನೆಚ್ಚಿನ ತಾಣ ಬೆಂಗಳೂರು. ಆದರೆ, ಕೀರ್ತಿ ಸುರೇಶ್ ಅವರು ಬೆಂಗಳೂರಿಗೆ ಹೆಚ್ಚು ಬಂದಿಲ್ಲವಂತೆ. "ನನಗೆ ಬೆಂಗಳೂರು ಅಂದರೆ ತುಂಬ ಇಷ್ಟ. ಆದರೆ, ಇಲ್ಲಿಗೆ ಹೆಚ್ಚು ಬಂದಿಲ್ಲ. ತುಂಬ ವರ್ಷಗಳ ನಂತರ ಈಗ ಬಂದಿದ್ದೇನೆ. ಪತಿ ಆ್ಯಂಟನಿ ಹಲವು ವರ್ಷಗಳ ಕಾಲ ಇಲ್ಲೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಬೆಂಗಳೂರಿನ ಬಗ್ಗೆ ನನಗಿಂತ ಹೆಚ್ಚು ಗೊತ್ತು. ನನಗೇನೋ ಕನ್ನಡದಲ್ಲಿ ನಟಿಸಲು ಇಷ್ಟ. ಒಂದೊಳ್ಳೆ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ಒಳ್ಳೆ ಕಥೆ, ಆರ್ ಬಂದರೆ ಖಂಡಿತ ನಟಿಸುತ್ತೇನೆ' ಎನ್ನುತ್ತಾರೆ.
ಇಷ್ಟು ಪಟ್ಟು ತಿನ್ನಬೇಕು, ಕಷ್ಟ ಪಟ್ಟು ದಂಡಿಸಬೇಕು
"ಉತ್ತಮ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಿ, ಉತ್ತಮ ಆಹಾರವನ್ನೇ ತಿನ್ನಿ' ಎಂದು ಪುರುಚ್ಛರಿಸುವ ಕೀರ್ತಿ, "ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ತಾವು ಬಳಸುವ ಅಡುಗೆ ಎಣ್ಣೆಯ ಕುರಿತೂ ಹೆಚ್ಚು ಎಚ್ಚರಿಕೆ ವಹಿಸಬೇಕು. ನಾನಂತೂ ಚೆನ್ನಾಗಿ ತಿನ್ನುತ್ತೇನೆ. ಹಾಗೇ ವರ್ಕೌಟ್ ಕೂಡ ಮಾಡುತ್ತೇನೆ. ಹೈಪ್ರೋಟಿನ್, ಲೋಕಾರ್ಬೊ ಡಯಟ್ ರೂಢಿಸಿಕೊಂಡಿದ್ದೇನೆ. ವಾರದಲ್ಲಿ ಆರು ದಿನ ವರ್ಕೌಟ್ ಮಾಡುತ್ತೇನೆ. ಪಿಕಲ್ ಬಾಲ್, ಸ್ವಿಮ್ಮಿಂಗ್, ಯೋಗ, ಸ್ಟ್ರೆಂತ್ ಟ್ರೇನಿಂಗ್... ಹೀಗೆ ವರ್ಕೌಟ್ ಜತೆಗೆ ಒಂದಲ್ಲ ಒಂದು ರೀತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತೇನೆ' ಎಂದು ಮಾಹಿತಿ ನೀಡುತ್ತಾರೆ.