Jai Hanuman 
ಟಾಲಿವುಡ್

ರಿಷಬ್​ ನಟನೆಯ 'ಜೈ ಹನುಮಾನ್' ಚಿತ್ರದಿಂದ ಹೊರ ಬಂದ್ರಾ ನಟ ತೇಜ ಸಜ್ಜ..! ಚಿತ್ರತಂಡ ಹೇಳಿದ್ದೇನು..?

ಹೈದರಾಬಾದ್​: ಪ್ರಶಾಂತ್ ವರ್ಮ ನಿರ್ದೇಶನದ 'ಹನುಮಾನ್' ಚಿತ್ರದ ಭಾರಿ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗವಾದ 'ಜೈ ಹನುಮಾನ್' (Jai Hanuman) ಬಗ್ಗೆ ಚಿತ್ರರಂಗದಲ್ಲಿ ಭಾರಿ ಕುತೂಹಲವಿದೆ. ಇತ್ತೀಚೆಗೆ ಈ ಚಿತ್ರದಿಂದ ನಟ ತೇಜ ಸಜ್ಜ (Teja Sajja) ಹೊರಬಂದಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ, ಇದೀಗ ತೇಜ ಸಜ್ಜ ಅವರ ತಂಡ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದೆ.
ವದಂತಿಗಳಿಗೆ ಬ್ರೇಕ್ ಹಾಕಿದ ನಟನ ತಂಡ
ಕಳೆದ ಕೆಲವು ದಿನಗಳಿಂದ 'ಜೈ ಹನುಮಾನ್' ಚಿತ್ರದಲ್ಲಿ ತೇಜ ಸಜ್ಜ ನಟಿಸುತ್ತಿಲ್ಲ, ಅವರು ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ತೇಜ ಸಜ್ಜ ಅವರ ಪಿಆರ್ ತಂಡ, "ತೇಜ ಸಜ್ಜ ಅವರ ಮುಂಬರುವ ಚಿತ್ರಗಳ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಊಹಾಪೋಹಗಳು ಸುಳ್ಳು. ಜೈ ಹನುಮಾನ್ ಚಿತ್ರದ ವಿಷಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹಳೆಯ ಯೋಜನೆಯಂತೆಯೇ ತೇಜ ಈ ಚಿತ್ರದ ಭಾಗವಾಗಿದ್ದಾರೆ. ಇಂತಹ ಆಧಾರರಹಿತ ವದಂತಿಗಳನ್ನು ನಂಬಬೇಡಿ," ಎಂದು ಅಧಿಕೃತವಾಗಿ ತಿಳಿಸಿದೆ.

ರಿಷಬ್ ಶೆಟ್ಟಿ ಮತ್ತು ತೇಜ ಸಜ್ಜ ಕಾಂಬಿನೇಷನ್

'ಜೈ ಹನುಮಾನ್' ಚಿತ್ರದಲ್ಲಿ ಕನ್ನಡದ ಸ್ಟಾರ್ ನಟ ರಿಷಬ್ ಶೆಟ್ಟಿ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಖಚಿತವಾಗಿದೆ. ಮೊದಲ ಭಾಗದಲ್ಲಿ 'ಹನುಮಂತು' ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ತೇಜ ಸಜ್ಜ, ಈ ಎರಡನೇ ಭಾಗದಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಿಷಬ್ ಮತ್ತು ತೇಜ ಇಬ್ಬರೂ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಪ್ರಸ್ತುತ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ,(ಏಜೆನ್ಸೀಸ್).