ಸಿನಿವಾಣಿ

ಇಂದು ಚಂದನ್ ಶೆಟ್ಟಿ ನಿವೇದಿತಾ ಕಲ್ಯಾಣ

ಬೆಂಗಳೂರು: ಗಾಯಕ ಚಂದನ್ ಶೆಟ್ಟಿ ಮತ್ತು ‘ಬಿಗ್​ಬಾಸ್’ ಖ್ಯಾತಿಯ ನಿವೇದಿತಾ ಗೌಡ ಜೋಡಿಯ ಕಲ್ಯಾಣಕ್ಕೆ ಅರಮನೆ ನಗರಿ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಸಭಾಂಗಣ ಸಿಂಗಾರಗೊಂಡಿದೆ. ಅಂದರೆ, ಮಂಗಳವಾರ (ಫೆ. 25) ಈ ಜೋಡಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡುತ್ತಿದ್ದು, ಇಷ್ಟು ದಿನ ಸ್ನೇಹಿತರಾಗಿ, ಪ್ರೇಮಿಗಳಾಗಿದ್ದವರು ಇದೀಗ ಸತಿ-ಪತಿಗಳಾಗುತ್ತಿದ್ದಾರೆ.

ಬಿಗ್​ಬಾಸ್​ನಿಂದ ಶುರುವಾಗಿದ್ದ ಚಂದನ್ ಮತ್ತು ನಿವೇದಿತಾ ಸ್ನೇಹ, ದಿನಗಳೆದಂತೆ ಪ್ರೀತಿಯಾಗಿ ಬದಲಾಗಿತ್ತು. ಕಳೆದ ವರ್ಷದ ‘ಯುವ ದಸರಾ 2019’ರ ವೇದಿಕೆ ಮೇಲೆ ಚಂದನ್ ಶೆಟ್ಟಿ ಪ್ರೇಮನಿವೇದನೆ ಮಾಡಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಅದನ್ನು ಅಷ್ಟೇ ಖುಷಿಯಲ್ಲಿ ಸ್ವೀಕರಿಸಿದ್ದರು ನಿವೇದಿತಾ. ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಅದ್ದೂರಿ ನಿಶ್ಚಿತಾರ್ಥವೂ ನಡೆದಿತ್ತು. ಈಗ ಮದುವೆಗೂ ಕಾಲಕೂಡಿ ಬಂದಿದೆ.

ವಿಶೇಷ ಏನೆಂದರೆ, ಮದುವೆ ದಿನವೇ ಈ ಜೋಡಿಯ ಹೊಸ ಆಲ್ಬಂ ‘ಗೆಟ್ ಹೈ’ ಶೀರ್ಷಿಕೆಯ ಹಾಡೊಂದು ಚಂದನ್ ಶೆಟ್ಟಿ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ.