ಬೆಂಗಳೂರು: ಕನ್ನಡ ಚಿತ್ರರಂಗದ ಬಹುಕಾಲದ ಪ್ರೇಮಿಗಳಾದ ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಂದು ಹಸೆಮಣೆ ಏರಲಿದ್ದಾರೆ. ನಗರದ ಹೊರವಲಯದಲ್ಲಿರುವ ಭವ್ಯ ರೆಸಾರ್ಟ್ನಲ್ಲಿ ಕೃಷ್ಣ ಮತ್ತು ಮಿಲನಾ ಸತಿಪತಿಗಳಾಗಲಿದ್ದು, ಬೆಳಿಗ್ಗೆ 9.30ಯಿಂದ 10.30ವರೆಗೆ ಸಲ್ಲುವ ಶುಭಲಗ್ನದಲ್ಲಿ ಮದುವೆ ನಡೆಯಲಿದೆ. ಈ ಮದುವೆಗೆ ಚಿತ್ರರಂಗದ ಹಲವು ಗಣ್ಯರು ಮತ್ತು ಇತರೆ ಸೆಲೆಬ್ರಿಟಿಗಳು ಸಾಕ್ಷಿಯಾಗಲಿದ್ದಾರೆ.
ಕೃಷ್ಣ ಮತ್ತು ಮಿಲನಾ ಮೊದಲಿಗೆ ಜತೆಯಾಗಿ ನಟಿಸಿದ್ದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ. ಆ ನಂತರ ‘ಚಾರ್ಲಿ’ಯೆಂಬ ಇನ್ನೊಂದು ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು. ಕ್ರಮೇಣ ಹತ್ತಿರವಾದ ಇಬ್ಬರೂ, ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಜತೆಯಾಗಿ ನಟಿಸುವುದಲ್ಲದೆ, ಆ ಚಿತ್ರದ ಬರವಣಿಗೆ ಮತ್ತು ನಿರ್ವಣದಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಆ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪರಸ್ಪರ ಪ್ರೀತಿಸುತ್ತಿರುವುದಾಗಿ ಘೋಷಿಸಿದ್ದರು. ವರ್ಷಾಂತ್ಯಕ್ಕೆ ಮದುವೆ ಎಂದು ಹೇಳಿದ್ದರೂ, ಲಾಕ್ಡೌನ್ನಿಂದಾಗಿ ಈ ಪ್ರೇಮಿಗಳ ದಿನಕ್ಕೆ ಮದುವೆಗೆ ಮುಹೂರ್ತ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ವಿವಾಹಪೂರ್ವ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೆಹಂದಿ, ಹಳದಿ ಮುಂತಾದ ಶಾಸ್ತ್ರಗಳಲ್ಲಿ ಭಾಗವಹಿಸುವುದರ ಜತೆಗೆ, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು, ಕೃಷ್ಣ ಮತ್ತು ಮಿಲನಾ ಅವರ ಪ್ರೀತಿಯ ಸಂಕೇತವಾಗಿ, ಅವರ ಹೊಸ ಚಿತ್ರ ‘ಲವ್ ಮಾಕ್ಟೇಲ್’ನ ಹೊಸ ಹಾಡೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.