ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಮಾಯಾಮೃಗ', "ಮುಕ್ತ' ಸೇರಿ ತಮ್ಮ ಧಾರಾವಾಹಿಗಳ ಮೂಲಕ ಕನ್ನಡಿಗರಿಗೆ ಕೋರ್ಟ್ರೂಮ್ ಡ್ರಾಮಾ ಕಥೆಗಳನ್ನು ಹತ್ತಿರವಾಗಿಸಿದ ಖ್ಯಾತಿ ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಅವರಿಗೆ ಸಲ್ಲುತ್ತದೆ. ಸಿನಿಮಾ, ಧಾರಾವಾಹಿಗಳ ಬಳಿಕ ಇದೀಗ ಅವರು ಒಟಿಟಿಯತ್ತ ಗಮನ ಹರಿಸಿದ್ದಾರೆ. ತಮ್ಮ ಒಡೆತನದ ಭೂಮಿಕಾ ಟಾಕೀಸ್ ಅಡಿಯಲ್ಲೇ ಒಟಿಟಿ ಪ್ರಾರಂಭಿಸುತ್ತಿರುವ ಅವರು, ಆ ಮೂಲಕ ಹೊಸ ಹೊಸ ಕಾರ್ಯಕ್ರಮ, ಕಥೆಗಳನ್ನು ಜನರಿಗೆ ಪರಿಚಯಿಸಲಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಟಿಎನ್ಎಸ್ "ಮಾಯಾ ಮರ್ಡರ್ ಕೇಸ್' ಎಂಬ ವೆಬ್ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.
""ಮಾಯಾ ಮರ್ಡರ್ ಕೇಸ್' ಒಂದು ಹೆಣ್ಣಿನ ಕಥೆ. ಕೋರ್ಟ್ರೂಮ್ ಸಸ್ಪೆನ್ಸ್ ಮತ್ತು ಒಂದು ಹೆಣ್ಣಿನ ಮನಸ್ಸಿನ ಬೇರೆ ರೀತಿಯ ಯೋಚನೆಗಳು, ಆಕೆ ರೆಬೆಲ್ ಆಗುವ ರೀತಿಯ ಸುತ್ತ ಕಥೆ ಸಾಗುತ್ತದೆ. ನಮ್ಮ ಒಟಿಟಿ ವೇದಿಕೆಯ ಮೊದಲ ಪ್ರಯೋಗ ಈ ಸರಣಿ ಆಗಿರಲಿದೆ. ಇದೇ ಆಗಸ್ಟ್ನಲ್ಲಿ ಒಟಿಟಿ ಮತ್ತು ಸರಣಿ ಎರಡನ್ನೂ ಲಾಂಚ್ ಮಾಡಲಿದ್ದೇವೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದೆ. "ಮಾಯಾ ಮರ್ಡರ್ ಕೇಸ್' ಮೊದಲ ಆವೃತ್ತಿಯಲ್ಲಿ 30 ನಿಮಿಷಗಳ ಎಂಟು ಸಂಚಿಕೆಗಳು ಇರಲಿವೆ. ಅದೇ ರೀತಿ ಮೂರು ಸಿರೀಸ್ಗಳನ್ನು ಹೊರತರುವ ಆಲೋಚನೆ ಇದೆ' ಎಂದು ಮಾಹಿತಿ ನೀಡುತ್ತಾರೆ ಟಿಎನ್. ಸೀತಾರಾಮ್. ಈ ಸರಣಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ಲಾಯರ್ ಪಾತ್ರದಲ್ಲಿ ಟಿಎನ್ಎಸ್ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಶ್ರೀನಿವಾಸಪ್ರಭು ಮತ್ತು ಸಿರಿ ರವಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
"ಧಾರಾವಾಹಿಗಳು ಮತ್ತು ವಾಹಿನಿಗಳ ಚಿಂತನೆ ಈಗ ಬದಲಾಗಿದೆ' ಎನ್ನುವ ಟಿಎನ್ಎಸ್, "ಅವರ ಅವಶ್ಯಕತೆಗಳು ಬೇರೆ ಆಗಿವೆ. ಮುಂಬೈ ಅಥವಾ ಬೇರೆಡೆ ಯಶಸ್ಸು ಗಳಿಸಿದ ಕಥೆಗಳು ಇಲ್ಲಿಗೆ ಬರುತ್ತವೆ. ಹೀಗಾಗಿ "ಮಗಳು ಜಾನಕಿ'ಯ ಬಳಿಕ ನಾನು ಮತ್ತೆ ಧಾರಾವಾಹಿ ಮಾಡಲಿಲ್ಲ. ಕಥೆಗಳು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಮ್ಮ ಆಲೋಚನೆಗೆ ಪೂರಕವಾಗಿ ಕಂಟೆಂಟ್ ಮೂಡಿಬರಬೇಕು. ಹೀಗಾಗಿ ನಾಲ್ಕೆ$ದು ಜನ ಗೆಳೆಯರ ಜತೆ ಸೇರಿ ಒಟಿಟಿ ಮಾಡಿಕೊಂಡಿದ್ದೇವೆ. "ಮಾಯಾ ಮರ್ಡರ್ ಕೇಸ್'ನ ಮೂರು ಸರಣಿಗಳ ಜತೆಗೆ ಈ ಹಿಂದೆ ಅರ್ಧಕ್ಕೆ ನಿಲ್ಲಿಸಿದ ಕಥೆಗಳು, ಧಾರಾವಾಹಿಗಳ ಜತೆಗೆ ಭಾರತದ ಅತಿ ದೊಡ್ಡ ಕೋರ್ಟ್ ವಿಚಾರಣೆಗಳು, ಸೂರ್ಯ ಭೂಮಿ ಸುತ್ತ ತಿರುಗುತ್ತಾನಾ, ಭೂಮಿ ಸೂರ್ಯನ ಸುತ್ತ ತಿರುಗುತ್ತಾ ಎಂಬ ವಿಷಯದಿಂದ ಹಿಡಿದು ಇತ್ತೀಚಿನ ಪ್ರಕರಣಗಳೂ ಸೇರಿ ವಿಶ್ವದ ಅತ್ಯಂತ ಕುತೂಹಲಕಾರಿ ಪ್ರಕರಣಗಳ ಟ್ರಯಲ್ಗಳ ಕುರಿತೂ ಕಥೆಗಳು ಇರಲಿವೆ' ಎನ್ನುತ್ತಾರೆ ಟಿಎನ್ಎಸ್.