ಸಿನಿವಾಣಿ

ಇದುವರೆಗೂ ಎಷ್ಟೆಲ್ಲಾ ಚಿತ್ರಗಳ ಟೈಟಲ್​ಗಳು ಬದಲಾಗಿವೆ ಗೊತ್ತಾ?

ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ 'ಲಕ್ಷ್ಮೀ ಬಾಂಬ್​' ಚಿತ್ರದ ಹೆಸರು ಬದಲಾಗಿರುವುದು ಇಷ್ಟರಲ್ಲಾಲೇ ಸಾಕಷ್ಟು ಸುದ್ದಿಯಾಗಿದೆ. ಹಿಂದೂ ದೇವರ ಹೆಸರಿಗೆ ಅವಮಾನ ಮಾಡುವಂತೆ ಶೀರ್ಷಿಕೆ ಇಡಲಾಗಿದ್ದು, ಹೆಸರನ್ನು ಬದಲಾಯಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹಲವು ಸಂಘ-ಸಂಸ್ಥೆಗಳು ಒತ್ತಡ ಹೇರಿದ ಕಾರಣ, ಚಿತ್ರದ ಹೆಸರನ್ನು ಇದೀಗ 'ಲಕ್ಷ್ಮೀ' ಎಂದು ಬದಲಾಯಿಸಲಾಗಿದೆ.

ಹೆಸರು ಬದಲಾಯಿಸಿರುವುದರಿಂದ ಪ್ರಕರಣವೇನು ಸುಖಾಂತ್ಯ ಕಂಡಿದೆ. ಆದರೆ, ಈ ತರಹದ ಬೆಳವಣಿಗೆ ಇದು ಮೊದಲೇನಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ತರಹ ಹೆಸರು ಬದಲಾಯಿಸಿದ ಹಲವು ಪ್ರಸಂಗಗಳು ಬಾಲಿವುಡ್​ನಲ್ಲಾಗಿವೆ ಎನ್ನುವುದು ವಿಶೇಷ.

ಕಳೆದ ವರ್ಷ ಸಾಕಷ್ಟು ಸುದ್ದಿಯಾದ ಒಂದು ಚಿತ್ರವೆಂದರೆ ಅದು ಕಂಗನಾ ರಣಾವತ್​ ಮತ್ತು ರಾಜಕುಮಾರ್​ ರಾವ್​ ಅಭಿನಯದ 'ಜಡ್ಜ್​ಮೆಂಟಲ್​ ಹೇ ಕ್ಯಾ'. ಚಿತ್ರಕ್ಕೆ ಮುಂಚೆ 'ಮೆಂಟಲ್​ ಹೇ ಕ್ಯಾ' ಎಂಬ ಹೆಸರನ್ನು ಇಡಲಾಗಿತ್ತು. ಮೆಂಟಲ್​ ಎಂಬ ಪದಬಳಕೆ ಸರಿಯಲ್ಲ ಮತ್ತು ಈ ಹೆಸರನ್ನು ಬದಲಾಯಿಸಬೇಕು ಎಂಬ ಒತ್ತಡ ಬಂದ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನು 'ಜಡ್ಜ್​ಮೆಂಟಲ್​ ಹೇ ಕ್ಯಾ' ಎಂದಬ ಬದಲಾಯಿಸಲಾಯಿತು. ಅದಕ್ಕೂ ಮುನ್ನ, ದೀಪಿಕಾ ಪಡುಕೋಣೆ, ಶಾಹಿದ್​ ಕಪೂರ್​ ಮತ್ತು ರಣವೀರ್ ಸಿಂಗ್​ ಅಭಿನಯದ ಚಿತ್ರಕ್ಕೆ 'ಪದ್ಮಾವತಿ' ಎಂಬ ಹೆಸರಿಡಲಾಗಿತ್ತು. ಆದರೆ, ಇತಿಹಾಸವನ್ನು ತಿರುಚಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚಿತ್ರಕ್ಕೆ 'ಪದ್ಮಾವತ್​' ಎಂದು ನಾಮಕರಣ ಮಾಡಿ ಅದೇ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು.

ಬರೀ ಇಷ್ಟೇ ಅಲ್ಲ, ಸಲ್ಮಾನ್​ ಖಾನ್​ ಅಭಿನಯದ 'ಟ್ಯೂಬ್​ಲೈಟ್​', ಶಾರೂಖ್​ ಖಾನ್​ ಮತ್ತು ಇರ್ಫಾನ್​ ಖಾನ್​ ಅಭಿನಯದ 'ಬಿಲ್ಲು', ಜಾನ್​ ಅಬ್ರಹಾಂ ಅಭಿನಯದ 'ಮದ್ರಾಸ್​ ಕೆಫೆ', ಆಯುಷ್ಮಾನ್​ ಶರ್ಮ ಅಭಿನಯದ 'ಲವ್​ಯಾತ್ರಿ' ಇವೆಲ್ಲಾ ಚಿತ್ರಗಳಿಗೂ ಮೊದಲು ಬೇರೆ ಹೆಸರುಗಳನ್ನು ಇಡಲಾಗಿತ್ತು. ಆದರೆ, ಜನರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಮೇಲೆ ಹೇಳಿದ ಎಲ್ಲಾ ಚಿತ್ರಗಳ ಹೆಸರುಗಳನ್ನು ಬದಲಾಯಿಸಲಾಯಿತು.