ಸಿನಿವಾಣಿ

ವಿಜಯ್ ವರ್ಸೆಸ್ ಶಿವ: ‘ಪರಾಶಕ್ತಿ’ ಟೈಟಲ್‌ಗಾಗಿ ಇಬ್ಬರು ನಟರ ನಡುವೆ ಶೀತಲಸಮರ

ಶಿವಮಲ್ಲಯ್ಯ ಸ್ಥಾವರಮಠ

ತಮಿಳು ಚಿತ್ರರಂಗದಲ್ಲಿ ಹೊಸದೊಂದು ‘ಟೈಟಲ್’ ವಿವಾದ ಎದ್ದು ನಿಂತಿದೆ. ಇದರಿಂದಾಗಿ ಖ್ಯಾತ ನಟರಾದ ಶಿವ ಕಾರ್ತಿಕೇಯನ್ ಹಾಗೂ ವಿಜಯ್ ಆ್ಯಂಟನಿ ಇಬ್ಬರ ಜಗಳಕ್ಕೆ ಕಾರಣವಾಗಿದೆ. ಇತ್ತೀಚೆಗೆ ಶಿವ ಕಾರ್ತಿಕೇಯನ್ ನಟನೆಯ 25ನೇ ಸಿನಿಮಾ ಅನೌನ್ಸ್ ಆಗಿತ್ತು. ಆದರೆ, ಟೈಟಲ್ ರಿವೀಲ್ ಮಾಡಿರಲಿಲ್ಲ. ತಮಿಳು ಹಾಗೂ ತೆಲುಗಿನಲ್ಲಿ ಮೂಡಿಬರುತ್ತಿರುವ ಚಿತ್ರದ ಟೈಟಲ್‌ನ್ನು ನಿರ್ದೇಶಕಿ ಸುಧಾ ಕೊಂಗರಾ ಬುಧವಾರ ರಿವೀಲ್ ಮಾಡಿದ್ದು, ಚಿತ್ರಕ್ಕೆ ‘ಪರಾಶಕ್ತಿ’ ಎಂದು ಹೆಸರಿಟ್ಟಿದ್ದಾರೆ. ಇದರ ಬೆನ್ನೆಲ್ಲೆ, ಕಾಕತಾಳೀಯ ಎಂಬಂತೆ ತಮಿಳು ನಟ ವಿಜಯ್ ಆ್ಯಂಟನಿ ತಮ್ಮ 25ನೇ ಚಿತ್ರದ ಶೀರ್ಷಿಕೆ ಘೋಷಿಸಿದ್ದು, ತಮಿಳಿನಲ್ಲಿ ‘ಶಕ್ತಿ ತಿರುಮಗನ್’ ಹಾಗೂ ತೆಲುಗಿನಲ್ಲಿ ‘ಪರಾಶಕ್ತಿ’ ಎಂದು ಇಟ್ಟಿದ್ದಾರೆ. ಎರಡು ಚಿತ್ರದ ಟೈಟಲ್‌ಗಳು ತೆಲುಗಿನಲ್ಲಿ ಕ್ಲ್ಯಾಶ್ ಆಗುತ್ತದೆ ಎಂದು ಯಾವಾಗ ತಿಳಿಯಿತೋ, ಆಗ ಎರಡು ಸಂಸ್ಥೆಗಳು ಜಾಲತಾಣದ ಮೂಲಕ ದಾಖಲೆ ನೀಡಲು ಮುಂದಾದವು. ಮೊದಲಿಗೆ ವಿಜಯ್ ಆ್ಯಂಟನಿ, ದ ಸೌತ್ ಇಂಡಿಯನ್ ಫಿಲಂ ಛೇಂಬರ್ಸ್ ಆಫ್ ಕಾಮರ್ಸ್‌ನಲ್ಲಿ ಕಳೆದ ವರ್ಷ ಜುಲೈ 22ರಂದು ‘ಪರಾಶಕ್ತಿ’ (ತೆಲುಗು) ಟೈಟಲ್ ನೋಂದಣಿ ಮಾಡಿಸಿರುವ ದಾಖಲೆಯನ್ನು ಜಾಲತಾಣದಲ್ಲಿ ಹಂಚಿಕೊಂಡು ಸ್ಪಷ್ಟನೆ ನೀಡಲು ಮುಂದಾದರು. ಬಳಿಕ ಶಿವ ಕಾರ್ತಿಕೇಯನ್ ಚಿತ್ರದ ನಿರ್ಮಾಣ ಸಂಸ್ಥೆ ಡಾನ್ ಪಿಕ್ಚರ್ಸ್, ತಮಿಳು ಚಿತ್ರ ನಿರ್ಮಾಪಕರ ಸಂಘದಲ್ಲಿ ಟೈಟಲ್ ರಿಜಿಸ್ಟರ್ ಮಾಡಿರುವುದನ್ನು ಹಂಚಿಕೊಂಡಿದೆ. ಈ ಮೂಲಕ ಎರಡು ತಮಿಳು ಚಿತ್ರತಂಡಗಳು ತೆಲುಗು ಟೈಟಲ್‌ಗಾಗಿ ಹೋರಾಟ ನಡೆಸುವಂತಾಗಿದೆ. -ಏಜೆನ್ಸೀಸ್