ಸಿನಿವಾಣಿ

ಒಂಟೆ ಮೇಲೆ ತ್ರಿವಿಕ್ರಮ ಸಾಹಸ

vijayavani

ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಸಿನಿಮಾ ಶೂಟಿಂಗ್ ಹಂತದಲ್ಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ರಾಜಸ್ಥಾನದ ಬಿರು ಬಿಸಿಲಿನಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಂಡಿದ್ದ ತಂಡ, ಸಾಹಸ ದೃಶ್ಯಗಳನ್ನೂ ಸೆರೆಹಿಡಿದುಕೊಂಡಿದೆ. ಅದೂ ಒಂಟೆಗಳ ಮೇಲೆ ಎಂಬುದು ವಿಶೇಷ!

ಚೊಚ್ಚಲ ಸಿನಿಮಾ ಎಂದ ತಕ್ಷಣ ಅಲ್ಲಿ ವಿಶೇಷತೆಗಳ ಸರಮಾಲೆಯೇ ಇರುತ್ತದೆ. ‘ತ್ರಿವಿಕ್ರಮ’ನಲ್ಲೂ ಅಂಥ ವಿಶೇಷಗಳನ್ನು ಅಳವಡಿಸುವ ಭರದಲ್ಲಿದ್ದಾರೆ ನಿರ್ದೇಶಕ ಸಹನಾ ಮೂರ್ತಿ. ಆ ಪ್ರಯುಕ್ತ ಮೊದಲ ಬಾರಿ ಒಂಟೆಗಳ ಮೇಲೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಚೇಸಿಂಗ್ ದೃಶ್ಯಗಳನ್ನೂ ಸೆರೆಹಿಡಿಯಲಾಗಿದೆ. ಈಗಾಗಲೇ ‘ಸೈರಾ ನರಸಿಂಹ ರೆಡ್ಡಿ’, ‘ದಬಂಗ್’, ‘ಬಾಡಿಗಾರ್ಡ್’, ‘ಪೊಕಿರಿ’ ಸೇರಿ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಿ ಮಾಸ್ಟರ್, ಒಂಟೆ ಮೇಲಿನ ಸಾಹಸ ಸನ್ನಿವೇಶಗಳಿಗೂ ನಿರ್ದೇಶನ ಮಾಡಿದ್ದಾರೆ. ಸತತ 15 ದಿನಗಳ ಕಾಲ ರಾಜಸ್ಥಾನದ ಮರಳುಗಾಡಲ್ಲಿ ನಡೆದ ಶೂಟಿಂಗ್​ನಲ್ಲಿ ನಾಯಕಿ ಆಕಾಂಕ್ಷಾ, ಹಾಸ್ಯ ನಟ ಸಾಧುಕೋಕಿಲ, ಬಾಲಿವುಡ್ ನಟ ರೋಹಿತ್ ರಾಯ್ ಸೇರಿ ಹಲವರು ಪಾಲ್ಗೊಂಡಿದ್ದರು. ಚಿತ್ರಕ್ಕೆ ರಾಮ್ಕೋ ಬಂಡವಾಳ ಹೂಡುತ್ತಿದ್ದಾರೆ.