ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೂರು ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಬೆಂಗಳೂರಿನ ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ಹೊಸ ಸಾಹಸ ಮಾಡಿ ಸೈ ಎನಿಸಿಕೊಂಡಿದ್ದಾರೆ. 14 ಸಾವಿರ ಬುಡಕಟ್ಟು ಮಕ್ಕಳೊಂದಿಗೆ ಭಾರತದ ರಾಷ್ಟ್ರಗೀತೆ ರೆಕಾರ್ಡ್ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.
ಈ ಹಾಡಿನ ರೆಕಾರ್ಡಿಂಗ್ಗೆ ರಿಕ್ಕಿ ಕೇಜ್ ಜತೆ ಬಾನ್ಸುರಿ ಮಾಂತ್ರಿಕ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಾಕೇಶ್ ಚೌರಾಸಿಯಾ, ಸಂತೂರ್ ವಾದಕ ರಾಹುಲ್ ಶರ್ಮಾ ಸಾಥ್ ನೀಡಿದ್ದಾರೆ. ಅಮಾನ್ ಮತ್ತು ಅಯಾನ್ ಸರೋದ್ ನುಡಿಸಿದ್ದು, ಪದ್ಮಶ್ರೀ ಶೇಕ್ ಮಹಬೂಬ್ ಸುಭಾನಿ ಮತ್ತು ಕಲೀಶಾಬಿ ಮಹಬೂಬ್ ನಾದಸ್ವರ, ಡಾ. ಜಯಂತಿ ಕುಮರೇಶ್ ವೀಣೆ, ಗಿರಿಧರ್ ಉಡುಪ ಕರ್ನಾಟಕ ಸಂಗೀತದ ತಾಳವಾದ್ಯ ನುಡಿಸಿದ್ದಾರೆ. ಭುವನೇಶ್ವರದ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನಲ್ಲಿ ಒಡಿಶಾದ 14 ಸಾವಿರ ಬುಡಕಟ್ಟು ಮಕ್ಕಳ ರಾಷ್ಟ್ರಗೀತೆ ಗಾಯನವನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ರಿಕ್ಕಿ ಕೇಜ್, "ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನಲ್ಲಿ 30 ಸಾವಿರಕ್ಕೂ ಹೆಚ್ಚು ಸ್ಥಳಿಯ ಬುಡಕಟ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಡಾ. ಅಚ್ಯುತ ಸಮಂತ ಆ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಅವರಲ್ಲಿ 14 ಸಾವಿರ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿ ಅತಿ ದೊಡ್ಡ ಆರ್ಕೆಸ್ಟ್ರಾದೊಂದಿಗೆ ರೆಕಾರ್ಡ್ ಮಾಡಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.