ಸಿನಿವಾಣಿ

ಪರಭಾಷಾ ಪಾರಮ್ಯ, ಕನ್ನಡಿಗ ಮೂಕಪ್ರೇಕ್ಷಕ : ಈ ವಾರ ಕನ್ನಡ ಸಿನಿಮಾಗಳ ಬಿಡುಗಡೆಯಿಲ್ಲ

| ಹರ್ಷವರ್ಧನ್​ ಬ್ಯಾಡನೂರು

ಪರಭಾಷಾ ಚಿತ್ರಗಳಿಗೆ ಮಣೆ ಹಾಕಲಾಗುತ್ತದೆ, ಕನ್ನಡ ಸಿನಿಮಾಗಳಿಗೆ ಕರ್ನಾಟಕದ ಚಿತ್ರಮಂದಿರಗಳಲ್ಲೇ ಪ್ರಾಮುಖ್ಯತೆ ನೀಡುತ್ತಿಲ್ಲ, ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಲೇಯಿದೆ. ಪ್ಯಾನ್​ ಇಂಡಿಯಾ ಪರಿಕಲ್ಪನೆಗೂ ಮುಂಚೆಯೇ ಕನ್ನಡ ಚಿತ್ರರಂಗದ ಈ ಬೇಡಿಕೆ ಇದ್ದೇ ಇತ್ತು. ಇದೀಗ, ಮತ್ತೆ ಮುನ್ನಲೆಗೆ ಬಂದಿದೆ. ಪರಭಾಷಾ ಚಿತ್ರಗಳ ವಿರುದ್ಧ ಮತ್ತೊಮ್ಮೆ ಧ್ವನಿ ಎದ್ದಿದೆ.

ಇಂದು ಕನ್ನಡ ಚಿತ್ರಗಳಿಲ್ಲ
ಈ ವಾರ ಕರ್ನಾಟಕದಲ್ಲಿ ಒಂದೂ ಕನ್ನಡ ಸಿನಿಮಾಗಳು ರಿಲೀಸ್​ ಆಗುತ್ತಿಲ್ಲ. ಅದಕ್ಕೆ ಕಾರಣ ಪರಭಾಷಾ ಚಿತ್ರಗಳ ಅಬ್ಬರ. ತಮಿಳಿನಲ್ಲಿ ರಜಿನಿಕಾಂತ್​ ಅಭಿನಯದ "ಜೈಲರ್​' ಗುರುವಾರ (ಆ.10) ರಿಲೀಸ್​ ಆಗಿದ್ದು, ತೆಲುಗಿನಲ್ಲಿ ಚಿರಂಜೀವಿ ನಟಿಸಿರುವ "ಭೋಲಾ ಶಂಕರ್​', ಬಾಲಿವುಡ್​ನಲ್ಲಿ ಸನ್ನಿ ಡಿಯೋಲ್​ ಅಭಿನಯದ "ಗದರ್​ 2' ಹಾಗೂ ಅಕ್ಷಯ್​ ಕುಮಾರ್​ ನಾಯಕನಾಗಿರುವ "ಓ ಮೈ ಗಾಡ್​ 2' ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಪರಭಾಷಾ ಚಿತ್ರಗಳ ಅಬ್ಬರದಿಂದ ಬೆಚ್ಚಿರುವ ಕನ್ನಡ ಚಿತ್ರತಂಡಗಳು, ರಿಲೀಸ್​ಗೆ ಹಿಂದೇಟು ಹಾಕಿದ್ದಾರೆ.

ಮಲ್ಟಿಪ್ಲೆಕ್ಸ್​ ಒಂದೇ ಸ್ವಲ್ಪ ತಲೆಬಿಸಿ
ಈ ನಾಲ್ಕು ಬಿಗ್​ ಬಜೆಟ್​ ಪರಭಾಷಾ ಸ್ಟಾರ್​ ಚಿತ್ರಗಳಿಂದ ಈ ವಾರ ಮಾತ್ರವಲ್ಲ ಮುಂದಿನ ಎರಡು ಮೂರು ವಾರಗಳ ಕಾಲ ಕನ್ನಡ ಚಿತ್ರಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ನವೀನ್​ ಶಂಕರ್​, ಅರ್ಚನಾ ಜೋಯಿಸ್​ ಅಭಿನಯದ ಶ್ರೀಕಾಂತ್​ ನಿರ್ದೇಶನದ "ಕ್ಷೇತ್ರಪತಿ' ಚಿತ್ರ ಆ. 18ರಂದು ರಿಲೀಸ್​ ಆಗಲಿದೆ. "130 ಸ್ಕ್ರೀನ್​ಗಳಲ್ಲಿ ರಿಲೀಸ್​ ಮಾಡಲು ಪ್ಲಾ$್ಯನ್​ ಹಾಕಿಕೊಂಡಿವೆ. ಅದರಂತೆ ಬಹುತೇಕ ಥಿಯೇಟರ್​ಗಳು ೈನಲ್​ ಆಗಿವೆ. ಆದರೆ, ಮಲ್ಟಿಪ್ಲೆಕ್ಸ್​ಗಳಿಂದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಹಿಂದೆ "ಹೊಂದಿಸಿ ಬರೆಯಿರಿ' ಸಿನಿಮಾ ರಿಲೀಸ್​ ಆದಾಗಲೂ ಶಾರುಖ್​ ಖಾನ್​ ನಟನೆಯ "ಪಠಾಣ್​' ಬಿಡುಗಡೆಯಾಗಿ, ಮಲ್ಟಿಪ್ಲೆಕ್ಸ್​ ಸಮಸ್ಯೆ ಎದುರಾಗಿತ್ತು' ಎಂದು ಹೇಳಿಕೊಳ್ಳುತ್ತಾರೆ ನವೀನ್​ ಶಂಕರ್​.

ಮುಂದಕ್ಕೆ ಹೋಯಿತು "ತೋತಾಪುರಿ 2'
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜಗ್ಗೇಶ್​, ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ವಿಜಯ್​ ಪ್ರಸಾದ್​ ನಿರ್ದೇಶನದ "ತೋತಾಪುರಿ 2' ಚಿತ್ರ ಇಂದು ರಿಲೀಸ್​ ಆಗಬೇಕಿತ್ತು. "ಜೈಲರ್​' ರಿಲೀಸ್​ ಡೇಟ್​ ಘೋಷಿಸಿಕೊಂಡ ಕೆಲ ದಿನಗಳ ಬಳಿಕ "ತೋತಾಪುರಿ 2' ಕೂಡ ಇದೇ ದಿನ ಬಿಡುಗಡೆ ಎಂದು ಘೋಷಿಸಿಕೊಂಡಿತ್ತು. ಆದರೆ, ಯಾವಾಗ "ಜೈಲರ್​' ಜತೆ "ಭೋಲಾ ಶಂಕರ್​', "ಓ ಮೈ ಗಾಡ್​ 2' ಮತ್ತು "ಗದರ್​ 2' ಚಿತ್ರಗಳೂ ಇಂದೇ ರಿಲೀಸ್​ ಎಂದು ಅಂತಿಮವಾಯಿತೋ, "ತೋತಾಪುರಿ 2' ಚಿತ್ರತಂಡ ರಿಲೀಸ್​ ದಿನಾಂಕವನ್ನು ಮುಂದೂಡಿದೆ.

ಫಿಲಂ ಚೇಂಬರ್​ ಮೆಟ್ಟಿಲೇರಿದ "ಕೌಸಲ್ಯಾ…'
ಪರಭಾಷಾ ಚಿತ್ರಗಳು ರಿಲೀಸ್​ ಆಗುತ್ತಿರುವ ಕಾರಣ ಬೆಂಗಳೂರಿನ ಮಲ್ಟಿಪ್ಲೆಕ್ಸ್​ಗಳಲ್ಲಿ ಶೋಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ "ಕೌಸಲ್ಯಾ ಸುಪ್ರಜಾ ರಾಮ' ಚಿತ್ರದ ನಿರ್ದೇಶಕ ಶಶಾಂಕ್​ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು.

ಹಾಸ್ಟೆಲ್​ ಹುಡುಗರು ವಿಭಿನ್ನ ಮಾರ್ಕೆಟಿಂಗ್​
ಮೂರು ವಾರಗಳನ್ನು ಪೂರೈಸಿರುವ ನಿತಿನ್​ ಕೃಷ್ಣಮೂರ್ತಿ ನಿರ್ದೇಶನದ "ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ ಇದೀಗ ನಾಲ್ಕನೇ ವಾರಕ್ಕೆ ಪದಾರ್ಪಣೆ ಮಾಡಲಿದೆ. ಅದರ ಬೆನ್ನಲ್ಲೇ ಪರಭಾಷಾ ಚಿತ್ರಗಳ ಆಟದ ನಡುವೆ ಹೊಸ ಬಗೆಯ ಮಾರ್ಕೆಟಿಂಗ್​ ಐಡಿಯಾ ಮಾಡಿಕೊಂಡಿದ್ದಾರೆ. ಅದರಂತೆ ಸೋಮವಾರ ಮಧ್ಯಾಹ್ನದಿಂದ ಗುರುವಾರ ರಾತ್ರಿವರೆಗೆ ಎರಡು ಟಿಕೆಟ್​ ಖರೀದಿಸಿದರೆ ಒಂದು ಟಿಕೆಟ್​ ಉಚಿತ ನೀಡಲಾಗುತ್ತಿದೆ. ಈ ಬಗ್ಗೆ ನಿರ್ಮಾಪಕ ವರುಣ್​ ಗೌಡ, "ಪರಭಾಷೆಯ ಸ್ಟಾರ್​ ಚಿತ್ರಗಳು ಬಂದರೆ ಒಳ್ಳೆಯ ಕನ್ನಡ ಸಿನಿಮಾಗಳನ್ನೂ ತೆಗೆದುಬಿಡುತ್ತಾರೆ. ಎರಡು ಟಿಕೆಟ್​ ಖರೀದಿಸಿದರೆ ಒಂದು ಟಿಕೆಟ್​ ಉಚಿತ ಕೊಡುಗೆ ನೀಡುತ್ತಿರುವುದು ಹಣ ಮಾಡುವ ಉದ್ದೇಶದಿಂದಲ್ಲ. ಅದರಿಂದ ಲಾಭವೂ ಇಲ್ಲ. ಹೆಚ್ಚು ಜನರಿಗೆ ತಲುಪಲಿ ಎಂಬುದು ನಮ್ಮ ಉದ್ದೇಶ' ಎಂದು ಮಾಹಿತಿ ನೀಡುತ್ತಾರೆ.

ಮುಂದೆಯೂ ಥಿಯೇಟರ್​ಗಳ ಸಮಸ್ಯೆ ಸಾಧ್ಯತೆ
ಕನ್ನಡ ಸಿನಿಮಾಗಳಿಗೆ ಥಿಯೇಟರ್​ ಸಮಸ್ಯೆಗಳು ಎದುರಾಗುವ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗೇಂದ್ರ, "ಸಾಮಾನ್ಯವಾಗಿ ಸ್ಟಾರ್​ ಸಿನಿಮಾಗಳು ರಿಲೀಸ್​ ಆದಾಗ ಥಿಯೇಟರ್​ ಮಾಲೀಕರು ಒಂದು ದೊಡ್ಡ ಮೊತ್ತಕ್ಕೆ ಚಿತ್ರವನ್ನು ಖರೀದಿಸಿಬಿಡುತ್ತಾರೆ. ಆ ಚಿತ್ರವನ್ನು ಸತತವಾಗಿ ಎಷ್ಟು ದಿನ ಬೇಕಾದರೂ ಪ್ರದರ್ಶಿಸಬಹುದು. ಅದನ್ನು ಎ್​ಎಚ್​ ಅರ್ಥಾತ್​ ಫಿಕ್ಸೆಡ್​ ಹೈಯರ್​ ಎನ್ನುತ್ತಾರೆ. ಆದರೆ, ಒಮ್ಮೆ ಆ ಸಿನಿಮಾ ತೆಗೆದು ಬೇರೆ ಸಿನಿಮಾ ಪ್ರದರ್ಶನ ಮಾಡಿದರೆ, ಅಲ್ಲಿಗೆ ಒಪ್ಪಂದ ಮುಗಿದಂತೆ. ಹೀಗಾಗಿ ಒಮ್ಮೆ ಖರೀದಿ ಮಾಡಿದ ಚಿತ್ರವನ್ನು ಥಿಯೇಟರ್​ ಮಾಲೀಕರು ತಮಗೆ ಲಾಭ ಬರುವವರೆಗೂ ಪ್ರದರ್ಶನ ಮುಂದುವರಿಸಿದರೆ, ಮುಂದಿನ ಎರಡು, ಮೂರು ವಾರಗಳವರೆಗೂ ಕನ್ನಡ ಚಿತ್ರಗಳಿಗೆ ಸಮಸ್ಯೆ ಆಗಬಹುದು' ಎಂದು ಮಾಹಿತಿ ನೀಡುತ್ತಾರೆ.