ಬೆಂಗಳೂರು: ಅಚ್ಚ ಕನ್ನಡದ ಸ್ವಚ್ಛ ಧ್ವನಿಯಾಗಿದ್ದ ನಟಿ, ನಿರೂಪಕಿ ಹಾಗೂ ಮಜಾ ಟಾಕೀಸ್ ವರು ಖ್ಯಾತಿಯ ಅಪರ್ಣಾ ವಸ್ತಾರೆ (58) ಅವರು ನಿನ್ನೆ (ಜುಲೈ 11) ರಾತ್ರಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ. ಕನ್ನಡದ ಧ್ರುವತಾರೆಯೊಂದು ಮರೆಯಾಗಿದ್ದು, ಸ್ಯಾಂಡಲ್ವುಡ್ಗೆ ಒಂದು ದೊಡ್ಡ ಆಘಾತವಾಗಿದೆ.
ಶ್ವಾಸಕೋಶ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳೆಲ್ಲರು ಶಾಕ್ ಆಗಿದ್ದಾರೆ. ನಿಜಕ್ಕೂ ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ಅಪರ್ಣಾ ಸಾವಿನ ವಿಚಾರ ತಿಳಿದು ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಸ್ವಚ್ಛ ಕನ್ನಡದ ದನಿಯೊಂದು ಮರೆಯಾಗಿದ್ದು, ಕನ್ನಡಭಿಮಾನಿಗಳಿಗೆ ಇದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲ. ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಣೆ ಮಾಡಿದ್ದರು. ಅಲ್ಲದೆ, ಮೆಟ್ರೋದಲ್ಲೂ ಕೂಡ ಅಪರ್ಣಾ ಅವರ ಧ್ವನಿ ಕೇಳುತ್ತಿತ್ತು. ಆದರೆ, ಇನ್ನು ಮುಂದೆ ಕೇವಲ ನೆನಪು ಮಾತ್ರ.
ಅಂದಹಾಗೆ ಅಪರ್ಣಾ ಅವರಿಗೆ ತಮ್ಮ ಬದುಕಿನಲ್ಲಿ ಒಂದು ಮಹದಾಸೆ ಇತ್ತು. ಅದೇನೆಂದರೆ, ನಿರೂಪಣೆ ಶಾಲೆಯನ್ನು ತೆರೆಯಬೇಕೆಂದು ಅಪರ್ಣಾ ಅವರ ಆಸೆಯಾಗಿತ್ತು. ಅದಕ್ಕಾಗಿ ಪ್ರಯತ್ನ ಕೂಡ ಪಟ್ಟಿದ್ದರು. ಅಲ್ಲದೆ, ತಮ್ಮ ಆಪ್ತರ ಬಳಿ ಪದೇಪದೆ ನಿರೂಪಣೆ ಶಾಲೆಯ ಬಗ್ಗೆ ಮಾತನಾಡುತ್ತಿದ್ದರು. ಈ ವಿಚಾರವನ್ನು ನಟ ಮಂಡ್ಯ ರಮೇಶ್ ಖಾಸಗಿ ವಾಹಿನಿಯಲ್ಲಿ ಬಹಿರಂಗಪಡಿಸಿ, ಭಾವುಕರಾದರು.
ಅಪರ್ಣಾ ಅವರ ಕನಸು ಕನಸಾಗಿಯೇ ಉಳಿದಿದೆ. ವಿಧಿಯಾಟದಲ್ಲಿ ಅಪರ್ಣಾ ಅವರ ಆಸೆ ಕಮರಿ ಹೋಗಿದೆ. ಕ್ರೂರ ವಿಧಿ ಕ್ಯಾನ್ಸರ್ ರೂಪದಲ್ಲಿ ಕನ್ನಡದ ಧ್ವನಿಯನ್ನೇ ಕಸಿದುಕೊಂಡಿದೆ. ಅನೇಕ ಅಭಿಮಾನಿಗಳು ಕ್ರೂರ ವಿಧಿಯನ್ನು ಶಪಿಸುತ್ತಿದ್ದಾರೆ.
ಅಂದಹಾಗೆ ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.
ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.
ಅಪರ್ಣ ಅವರು ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ಈವರೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಪರ್ಣಾ ಅವರು 2005ರಲ್ಲಿ ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಅಪರ್ಣ ಅವರ ತಂದೆ ಕೆ.ಎಸ್.ನಾರಾಯಣಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.