ಮುಂಬೈ: ನಟಿ ಮಲ್ಲಿಕಾ ಶೆರಾವತ್ ( Mallika Sherawat ) ಬಾಲಿವುಡ್‌ನಲ್ಲಿ ಗ್ಲಾಮರಸ್ ಪಾತ್ರಗಳಿಂದಲೇ ಗಮನ ಸೆಳೆದವರು. ಅದರಲ್ಲೂ ಮರ್ಡರ್ ಸಿನಿಮಾದಲ್ಲಿ ಬಿಕಿನಿ ಮತ್ತು ಕಿಸ್ಸಿಂಗ್ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದರು. ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರಿಂದ ಅನೇಕ ಜನರಿಂದ ಟೀಕೆಗೆ ಗುರಿಯಾಗಿದ್ದರು. ಇದಕ್ಕೆಲ್ಲ ಕ್ಯಾರೆ ಎನ್ನದೇ ನಟನೆ ಮುಂದುವರಿಸಿದ್ದರು. ಒಂದು ಕಾಲದಲ್ಲಿ ಸಖತ್ ಬಿಜಿಯಾಗಿದ್ದ ಮಲ್ಲಿಕಾ ಶೆರಾವತ್ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರು.
2017ರಲ್ಲಿ ಕೊನೆಯದಾಗಿ ಜೀನತ್ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಸುದೀರ್ಘ ಅಂತರ ಕಾಯ್ದುಕೊಂಡ ಮಲ್ಲಿಕಾ ಶೆರಾವತ್, 2022ರಲ್ಲಿ ಆರ್ಕೆ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡರು. ಅವಕಾಶಗಳ ಕೊರತೆಯಿಂದಾಗಿ ಮಲ್ಲಿಕಾ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಲ್ಲಿಕಾ, ತಮ್ಮ ಬೋಲ್ಡ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.
ತಾಜಾ ಸಂಗತಿ ಏನೆಂದರೆ, ತಮ್ಮ ಹೊಸ ಚಿತ್ರದ ಪ್ರಚಾರ ನಿಮಿತ್ತ ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ಮಲ್ಲಿಕಾ ಶೆರಾವತ್ ಅವರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ತೆಲುಗು ನಿರ್ದೇಶಕರೊಬ್ಬರ ವಿಚಿತ್ರ ಬೇಡಿಕೆ ಕೇಳಿ ಬೆಚ್ಚಿಬಿದ್ದೆ ಎಂದು ಹೇಳಿದ್ದಾರೆ. ದಕ್ಷಿಣ ಭಾರತದ ನಿರ್ದೇಶಕರು ಅದರಲ್ಲೂ ತೆಲುಗಿನವರಿಗೆ ನಟಿಯರ ಸೊಂಟ ಮತ್ತು ಹೊಟ್ಟೆಯ ಬಗ್ಗೆ ವಿಶೇಷವಾದ ವ್ಯಾಮೋಹವಿದೆ ಎಂದು ಮಲ್ಲಿಕಾ ಶೆರವಾತ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನಾನು ದಕ್ಷಿಣ ಭಾರತದ ಚಿತ್ರವೊಂದರ ಹಾಡಿನ ಚಿತ್ರೀಕರಣದಲ್ಲಿದ್ದೆ. ಈ ವೇಳೆ ಡೈರೆಕ್ಟರ್ ನನ್ನ ಹತ್ತಿರ ಬಂದು ಮೇಡಂ, ನೀವು ಎಷ್ಟು ಹಾಟ್ ಆಗಿದ್ದೀರಿ ಎಂಬುದನ್ನು ತೋರಿಸಬೇಕೆಂದು ನಾವು ಬಯಸುತ್ತೇವೆ ಎಂದರು. ಅದಕ್ಕೆ ನಾನು ಕೂಡ ಒಪ್ಪಿದೆ. ಬಹುಶಃ ವಿಶೇಷವಾದ ಐಟಂ ಡಾನ್ಸ್ ಇರಬಹುದು ಎಂದು ಭಾವಿಸಿದೆ. ಆದರೆ, ಈ ದೃಶ್ಯದಲ್ಲಿ ನಾಯಕ ನಿಮ್ಮ ಹೊಟ್ಟೆಯನ್ನು ಮೇಲೆ ರೋಟಿ ಬೇಯಿಸುತ್ತಾನೆ ಎಂದರು. ಇದನ್ನು ಕೇಳಿ ಒಂದು ಕ್ಷಣ ನಾನು ಶಾಕ್ ಆದೆ. ಸೊಂಟದ ಮೇಲೆ ರೊಟ್ಟಿ ಬೇಯಿಸುವ ಮೂಲಕ ನಾನು ಎಷ್ಟು ಹಾಟ್ ಆಗಿದ್ದೇನೆ ಎಂಬುದನ್ನು ತೋರಿಸುವುದು ಅವರ ಆಲೋಚನೆಯಾಗಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದೆ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದಹಾಗೆ ಮಲ್ಲಿಕಾ, 2003 ರಲ್ಲಿ ತೆರೆಕಂಡ ‘ಖ್ವೈಶ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 2004ರಲ್ಲಿ ಬಿಡುಗಡೆಯಾದ ‘ಮರ್ಡರ್’ ಚಿತ್ರದ ಮೂಲಕ ಗಮನ ಸೆಳೆದರು. ಈ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಝೀ ಸಿನಿ ಪ್ರಶಸ್ತಿಯನ್ನು ಗೆದ್ದರು. ಬಾಕ್ಸ್ ಆಫೀಸ್ನಲ್ಲೂ ಈ ಸಿನಿಮಾ ದೊಡ್ಡ ಅಲೆ ಸೃಷ್ಟಿಸಿತು.
ಜಾಕಿಚಾನ್ ಅಭಿನಯದ ಹಾಲಿವುಡ್ ಚಿತ್ರ ‘ಮಿಥ್’ ನಲ್ಲೂ ಮಲ್ಲಿಕಾ ನಟಿಸಿದ್ದರು. 2006ರಲ್ಲಿ ತೆರೆಕಂಡ ‘ಪ್ಯಾರ್ ಕೆ ಸೈಡ್ ಎಫೆಕ್ಟ್ಸ್’ ಸಿನಿಮಾ ಹೆಚ್ಚು ಮೆಚ್ಚುಗೆ ಗಳಿಸಿತು. ಮಲ್ಲಿಕಾ ಕೊನೆಯದಾಗಿ 2022ರಲ್ಲಿ ಜಾಟ್ ಕಪೂರ್ ಅಭಿನಯದ ಆರ್ಕೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಮಲ್ಲಿಕಾ ಅವರ ಮುಂಬರುವ ಚಿತ್ರ “ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ”, ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಮತ್ತು ತೃಪ್ತಿ ದಿಮ್ರಿ ನಟಿಸಿದ್ದಾರೆ. (ಏಜೆನ್ಸೀಸ್)