ಸಿನಿವಾಣಿ

ಕಾಣೆಯಾಗಿರುವುದು ಭಾವನೆಗಳು: ಪ್ರಕಟಣೆಯ ಕುರಿತು ನಿರ್ದೇಶಕ ಅನಿಲ್ ಮಾತು

Webdesk - Ravikanth

ನಾಳೆ ಬಿಡುಗಡೆಯಾಗುತ್ತಿರುವ ಎಂಟು ಚಿತ್ರಗಳ ಪೈಕಿ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಹ ಒಂದು. ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ, ಆಶಿಕಾ ರಂಗನಾಥ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ‘ರ್ಯಾಂಬೋ 2’ ಖ್ಯಾತಿಯ ಅನಿಲ್ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಮುಖ್ಯ ಪಾತ್ರದಲ್ಲಿ ನಟಿಸಿ, ಚಿತ್ರದ ನಿರ್ವಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಅವರು, ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿ ಮತ್ತು ಜಾಹೀರಾತುಗಳಿಂದ ಹುಟ್ಟಿಕೊಂಡ ಕಥೆ ಇದು ಎನ್ನುತ್ತಾರೆ. ‘ಪತ್ರಿಕೆಗಳಲ್ಲಿ ಕಾಣೆಯಾದವರ ಕುರಿತು ಸುದ್ದಿ ಬರುತ್ತಿರುತ್ತವೆ. ಇಷ್ಟಕ್ಕೂ ಜನ ಯಾಕೆ ಕಾಣೆಯಾಗಿರುತ್ತಾರೆ? ಇದರ ಹಿನ್ನೆಲೆ ಏನು? ಎಂದು ಹುಡುಕುತ್ತಾ ಹೋದಾಗ ಒಂದಿಷ್ಟು ವಿಷಯಗಳು ಸಿಕ್ಕವು. ಇನ್​ಸ್ಪೆಕ್ಟರ್ ಸ್ನೇಹಿತರೊಬ್ಬರು ಒಂದಿಷ್ಟು ಮಾಹಿತಿ ಕೊಟ್ಟರು. ಅದನ್ನೆಲ್ಲ ಸೇರಿಸಿ ಕಥೆ ಮಾಡಿದೆ. ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಕಥೆ ಇದು. ಇಲ್ಲಿ ಮಕ್ಕಳೂ ಇದ್ದಾರೆ, ಹಿರಿಯರೂ ಇದ್ದಾರೆ. ಇಲ್ಲಿ ಮನುಷ್ಯರು ಕಾಣೆಯಾಗುವುದಿಲ್ಲ, ಕಾಣೆಯಾಗುತ್ತಿರುವುದು ಎಮೋಷನ್​ಗಳು. ಇಲ್ಲಿ ಭಾವೆನಗಳಿಗೆ ಥ್ರಿಲ್ಲಿಂಗ್ ಸ್ಪರ್ಶ ಕೊಟ್ಟಿದ್ದೇನೆ. ಚಿತ್ರವು ಮೂರು ಕಾಲಘಟ್ಟದಲ್ಲಿರಲಿದ್ದು, ಒಬ್ಬ ಮನುಷ್ಯನ ಬಾಲ್ಯ, ಪ್ರಾಯ ಮತ್ತು ಮುಪು್ಪ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ.