ಮುಂಬೈ: ಈ ನಟಿ 25 ವರ್ಷಗಳ ಹಿಂದೆ ಒಂದು ಭವಿಷ್ಯ ನುಡಿದಿದ್ದರಂತೆ. ಅದು ಈಗ ಸತ್ಯವಾಗಿದೆಯಂತೆ...
ಸದ್ಯದ ಪರಿಸ್ಥಿತಿಗೆ ಹೋಲಿಸಿ ಹೇಳುವುದಾದರೆ, ಕರೊನಾ ಸೋಂಕು ಹಬ್ಬುವ ಭೀತಿಯಲ್ಲಿ ಇಡೀ ವಿಶ್ವವೇ ಸ್ತಬ್ಧವಾಗುತ್ತದೆ ಎಂದು ಆ ನಟಿ ಭವಿಷ್ಯ ನುಡಿದಿದ್ದರೆ ಎಂಬ ಪ್ರಶ್ನೆ ಮನದಲ್ಲಿ ಮೂಡಿದರೆ ನಿಮ್ಮ ತಪ್ಪೇನಿಲ್ಲ. ಆದರೆ, ಅದು ಸತ್ಯವಲ್ಲ.
ಹಾಗಾದರೆ ಸತ್ಯ ಏನು? ಆ ನಟಿ ಯಾರು? ಸತ್ಯ ಏನೆಂದರೆ, ಅದೇ ತಾನೆ ಬಾಲಿವುಡ್ನ ವೃತ್ತಿಬದುಕು ಆರಂಭಿಸಿದ್ದ ಸಂದರ್ಭದಲ್ಲಿ ಬಾಲಿವುಡ್ ದಿಗ್ಗಜ ರಾಜೇಶ್ ಖನ್ನಾ ಅವರ ಪುತ್ರಿ ಟ್ವಿಂಕಲ್ ಖನ್ನಾ, 25 ವರ್ಷಗಳ ಬಳಿಕ ಗಂಡ, ಇಬ್ಬರು ಮಕ್ಕಳೊಂದಿಗೆ, ಒಂದು ನಾಯಿಯನ್ನು ಸಾಕಿಕೊಂಡು ಸಂಸಾರ ಮಾಡುತ್ತಿರುತ್ತೇನೆ ಎಂದು ತಮ್ಮ ಬಗ್ಗೆ ತಾವೇ ಭವಿಷ್ಯ ಹೇಳಿಕೊಂಡಿದ್ದರಂತೆ.
ಆ ಭವಿಷ್ಯದಂತೆ ಈಗ ಅವರು ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿ ಆರವ್ ಎಂಬ ಪುತ್ರ ಹಾಗೂ ನಿಟಾರಾ ಎಂಬ ಪುತ್ರಿಯೊಂದಿಗೆ ಒಂದು ನಾಯಿಯನ್ನು ಸಾಕಿಕೊಂಡು ಸಂಸಾರ ಸರಿದೂಗಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತುಂಬಾ ಕ್ರಿಯಾಶೀಲವಾಗಿರುವ ಟ್ವಿಂಕಲ್ ಖನ್ನಾ, ಸಾಮಾಜಿಕ ಜಾಲತಾಣವೊಂದಕ್ಕೆ ಉದಯೋನ್ಮುಖ ನಟಿಯಾಗಿ ತಾವು ಕೊಟ್ಟಿದ್ದ ಮೊದಲ ಸಂದರ್ಶನದ ವಿವರಗಳನ್ನು ಪ್ರಸ್ತಾಪಿಸಿ, 25 ವರ್ಷಗಳ ನಂತರ ಭವಿಷ್ಯ ಸತ್ಯವಾಗಿದೆ ಎಂದು ಮಂಗಳವಾರ ಬರೆದುಕೊಂಡಿದ್ದಾರೆ.
ಈ ಸಂದರ್ಶನ ಕೊಟ್ಟ 5 ವರ್ಷಗಳ ಬಳಿಕ ಅಕ್ಷಯ್ ಕುಮಾರ್ ಅವರನ್ನು ತಾವು ವರಿಸಿದ್ದಾಗಿ ಟ್ವಿಂಕಲ್ ಹೇಳಿಕೊಂಡಿದ್ದಾರೆ. ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಹೊಂದಿದ್ದಾಗಿ ತಿಳಿಸಿದ್ದಾರೆ. ಜೀವನೋಪಾಯಕ್ಕೆ ಕ್ಯಾಂಡಲ್ ಬಿಜಿನೆಸ್ ಮಾಡುವ ತಾವು ಆಗಾಗ ಕಾಲು ಮುರಿದುಕೊಳ್ಳುವ ಹವ್ಯಾಸ ಹೊಂದಿರುವುದಾಗಿ ತಮ್ಮನ್ನು ತಾವು ತಮಾಷೆ ಮಾಡಿಕೊಂಡಿದ್ದಾರೆ.
ತಾವು ಸಂದರ್ಶನ ಕೊಟ್ಟ ಸಂದರ್ಭದಲ್ಲಿ ಒಬ್ಬ ಪತಿ ಮತ್ತು ಇಬ್ಬರು ಮಕ್ಕಳನ್ನು ಹೊಂದುವ ಬಗ್ಗೆ ತಾವೇ ಗೊಂದಲದಲ್ಲಿ ಇದ್ದುದಾಗಿಯೂ, ಆದರೂ ಅದು ಆಗಬೇಕೆಂದು ಮನದಲ್ಲೇ ಅಂದುಕೊಂಡಿದ್ದಾಗಿ ಟ್ವಿಂಕಲ್ ಖನ್ನಾ ಹೇಳಿದ್ದಾರೆ.