ಸಿನಿವಾಣಿ

ಅವರೆಲ್ಲ ನನ್ನಿಂದ ಅದನ್ನೇ ಬಯಸಿದ್ದರು! ಕಹಿ ಕ್ಷಣವನ್ನು ನೆನೆದು ಕಣ್ಣೀರಿಟ್ಟ ನಟಿ ಕೃತಿ ಶೆಟ್ಟಿ

ಹೈದರಾಬಾದ್​: ಚಿತ್ರರಂಗದಲ್ಲಿ ಸ್ಟಾರ್​ ಡಮ್ ಪಡೆಯುವುದು ಅಷ್ಟು ಸುಲಭವಲ್ಲ. ಸಾಕಷ್ಟು ಸಿನಿಮಾ ಮಾಡಿದರೂ ಹೆಸರು, ಮನ್ನಣೆ ಸಿಗುವುದಿಲ್ಲ. ಆದರೆ, ಕೆಲವರು ಕೇವಲ ಒಂದು ಅಥವಾ ಎರಡು ಸಿನಿಮಾಗಳಲ್ಲಿ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಚೊಚ್ಚಲ ಸಿನಿಮಾದಿಂದಲೇ ಸ್ಟಾರ್ ಪಟ್ಟ ಪಡೆದುಬಿಡುತ್ತಾರೆ. ಆ ಸಾಲಿಗೆ ಸೇರಿದವರಲ್ಲಿ ನಟಿ ಕೃತಿ ಶೆಟ್ಟಿ ಕೂಡ ಒಬ್ಬರು.

ಕೃತಿ ನಟಿಸಿದ ಚೊಚ್ಚಲ ಸಿನಿಮಾ 'ಉಪ್ಪೇನ' ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಇದಾದ ಬಳಿಕ ಸಾಕಷ್ಟು ಆಫರ್​ಗಳು ಕೃತಿಯನ್ನು ಅರಸಿ ಬರುತ್ತಿವೆ. ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ತನ್ನ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಮಾತನಾಡುತ್ತಾ ಕೃತಿ ಭಾವುಕರಾದರು.

ಉಪ್ಪೇನ ಸಿನಿಮಾ ದೊಡ್ಡ ಹಿಟ್ ಆಯಿತು. ಆದರೆ, ಕೆಲವರು ನಾನು ಸೋಲುತ್ತೇನೆ ಎಂದು ನಿರೀಕ್ಷಿಸಿದ್ದರು. ಮೊದಲ ಸಿನಿಮಾ ಫ್ಲಾಪ್ ಆಗಿದ್ದರೆ, ನನ್ನನ್ನು ತುಳಿಯಲು ಒಂದು ವರ್ಗದ ಜನರು ಬಯಸಿದ್ದರು. ಆದರೆ, ಸಿನಿಮಾ ಸೂಪರ್​ ಡೂಪರ್​ ಹಿಟ್​​ ಆಯಿತು. ನಾನು ಹಿಟ್ ಮತ್ತು ಫ್ಲಾಪ್ ಎರಡನ್ನೂ ಸಮಾನವಾಗಿ ತೆಗೆದುಕೊಳ್ಳುತ್ತೇನೆ. ನನ್ನ ಮೊದಲ ಚಿತ್ರ ಯಶಸ್ವಿಯಾದಾಗ ಅದರ ಸಂಪೂರ್ಣ ಕ್ರೆಡಿಟ್ ಅನ್ನು ನಾನು ತೆಗೆದುಕೊಳ್ಳಲಿಲ್ಲ. ಅದೇ ರೀತಿ ಫ್ಲಾಪ್ ಆಗಿದ್ದರೂ ಪೂರ್ಣ ಕ್ರೆಡಿಟ್ ನಾನು ತೆಗೆದುಕೊಳ್ಳುವುದಿಲ್ಲ. ಫ್ಲಾಪ್ ಸಿನಿಮಾಗಳಿಂದಲೇ ನಾನು ಸುಧಾರಿಸಿದ್ದೇನೆ ಎಂದು ಕೃತಿ ಸ್ಪಷ್ಟಪಡಿಸಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ಎಲ್ಲಿ ತಪ್ಪುಗಳು ನಡೆದಿವೆ ಎಂಬುದನ್ನು ತಿಳಿದುಕೊಂಡು ಅದರಿಂದ ಕಲಿತೆ. ಯಶಸ್ಸಿಗಿಂತ ಸೋಲಿನಿಂದ ಕಲಿತದ್ದೇ ಹೆಚ್ಚು. ಸೋಲುಗಳಿಂದಲೇ ನಟಿಯಾಗಿ ಉತ್ತಮವಾಗಿದ್ದೇನೆ. ಯಾಕೆ ಸಿನಿಮಾ ಸೋಲು ಕಂಡಿತು ಎಂಬ ನನ್ನ ವಿಶ್ಲೇಷಣೆ ನನ್ನ ಪರ ಕೆಲಸ ಮಾಡಿದೆ. ಇದು ಟೀಕೆಗಳನ್ನು ಎದುರಿಸಲು ಸಹಾಯ ಮಾಡಿತು ಎಂದು ಕೃತಿ ಶೆಟ್ಟಿ ವಿವರಿಸಿದರು.

'ಉಪ್ಪೇನ' ಚಿತ್ರದ ಮೂಲಕ ಸೂಪರ್ ಹಿಟ್ ಪಡೆದ ಕೃತಿ ಶೆಟ್ಟಿ ನಂತರ 'ಶ್ಯಾಮ್ ಸಿಂಗರಾಯ್', 'ಬಂಗಾರರಾಜು' ಸಿನಿಮಾಗಳಲ್ಲಿ ಅದೇ ಯಶಸ್ಸು ಕಂಡಿದ್ದಾರೆ. ಸದ್ಯ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಲಯಾಳಂನ ‘ಅಜಯಂತೇ ರಾಂಧಂ ಮೋಷನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ 'ಲವ್ ಇನ್ಶೂರೆನ್ಸ್ ಕಂಪನಿ' ಮತ್ತು 'ವಾ ವಾಥಿಯಾರ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)