ಸಿನಿವಾಣಿ

ಸುಶಾಂತ್​ ತರಹ ನಾನೂ ಸಾಯೋದಕ್ಕೆ ಕಾಯ್ತಿದ್ದಾರೆ ... ಪಾಯಲ್​ ಆರೋಪ

ಮುಂಬೈ: ಕೆಲವು ವರ್ಷಗಳ ಹಿಂದೆ ತಮ್ಮನ್ನು ಲೈಂಗಿಕವಾಗಿ ಶೋಷಿಸುವುದಕ್ಕೆ ಬಾಲಿವುಡ್​ನ ಜನಪ್ರಿಯ ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ಪ್ರಯತ್ನಿಸಿದರು ಎಂದು ಪಾಯಲ್​ ಘೋಶ್​ ಆರೋಪಿಸಿದ್ದಷ್ಟೇ ಅಲ್ಲ, ಅನುರಾಗ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೀಗ ಅವರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹಾಯವನ್ನು ಕೇಳಿದ್ದಾರೆ. ಒಂದು ಪಕ್ಷ ವಿಚಾರಣೆ ತಡವಾದರೆ, ಈ ಮಾಫಿಯಾದವರು ನನ್ನನ್ನು ಸಾಯಿಸುತ್ತಾರೆ. ಆ ನಂತರ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ ಎಂದು ಟ್ವೀಟ್​ ಮಾಡಿರುವ ಪಾಯಲ್​, ನರೇಂದ್ರ ಮೋದಿ ಅವರಿಗೂ ಟ್ಯಾಗ್​ ಮಾಡಿದ್ದಾರೆ.

ಇದರ ಜತೆಗೆ ಇನ್ನೊಂದು ಟ್ವೀಟ್​ ಮಾಡಿರುವ ಅವರು, 'ನಾನು ಸಹ ಸುಶಾಂತ್​ ಸಿಂಗ್​ ತರಹ ಸಾಯುವುದಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಏಕೆಂದರೆ, ಎಷ್ಟೇ ಈ ವಿಷಯದ ಬಗ್ಗೆ ಮಾತನಾಡಿದರೂ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಒಂದು ಪಕ್ಷ ನಾನು ಸತ್ತರೆ, ನನ್ನ ಸಾವು ಸಹ ಬೇರೆ ಕಲಾವಿದರ ತರಹವೇ ರಹಸ್ಯವಾಗಿ ಉಳಿದುಬಿಡುತ್ತದೆ' ಎಂದು ಪಾಯಲ್​ ಬರೆದುಕೊಂಡಿದ್ದಾರೆ.

ಇನ್ನು ಅನುರಾಗ್​ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವ ಕುರಿತು ಚಾನಲ್​ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪಾಯಲ್​, 'ಕೆಲವು ವರ್ಷಗಳ ಹಿಂದೆ ಅನುರಾಗ್​ ಅವರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದೆ. ಅವರು ನನ್ನ ಜತೆಗೆ ಬಹಳ ಕೆಟ್ಟದಾಗಿ ನಡೆದುಕೊಂಡರು. ಈ ಘಟನೆ ನಡೆದು ಹಲವು ವರ್ಷಗಳಾದರೂ, ಈಗಲೂ ನನ್ನನ್ನು ಕಾಡುತ್ತಿದೆ. ಈ ವಿಷಯದ ಕುರಿತಾಗಿ ಮಾತನಾಡಬೇಕು ಎಂದು ಎಷ್ಟೋ ಬಾರಿ ಪ್ರಯತ್ನಪಟ್ಟೆ. ಆದರೆ, ಕುಟುಂಬದವರು, ಸ್ನೇಹಿತರು ಇದಕ್ಕೆ ಒಪ್ಪಲಿಲ್ಲ. ಆದರೂ ನಾನು ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೆ ಮುಂದಾಗಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.