ಸಿನಿವಾಣಿ

ಹೊರಗಿನವರಿಗೆ ವಿಲನ್​, ಹತ್ತಿರದವರಿಗೆ ಹೀರೋ: ಇಪ್ಪತ್ತೈದರ ಖುಷಿಯಲ್ಲಿ ಹರೀಶ್ ರಾಯ್ ಮನದಾಳ

| ರವಿಕಾಂತ ಕುಂದಾಪುರ

ಇಪ್ಪತ್ತೈದು ವರ್ಷಗಳು ಹೇಗೆ ಕಳೆದು ಹೋದವು ಅಂತನೇ ಗೊತ್ತಾಗಲಿಲ್ಲ. ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ. ಈ ಎರಡೂವರೆ ದಶಕಗಳಲ್ಲಿ ಎದ್ದಿದ್ದೂ ಇದೆ, ಬಿದ್ದಿದ್ದೂ ಇದೆ ...’ ಎನ್ನುತ್ತ ತಮ್ಮ ಸಿನಿಪಯಣದ ನೆನಪುಗಳಲ್ಲಿ ಮುಳುಗೇಳಲು ಆರಂಭಿಸಿದರು ಹರೀಶ್ ರಾಯ್.

1995ರಲ್ಲಿ ತೆರೆ ಕಂಡ ಉಪೇಂದ್ರ ನಿರ್ದೇಶನದ ಶಿವರಾಜಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಓಂ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದವರು ಹರೀಶ್ ಆಚಾರ್ಯ. ‘ಓಂ’ನಲ್ಲಿನ ‘ಡಾನ್ ರಾಯ್’ ಪಾತ್ರದ ಮೂಲಕ ಹರೀಶ್ ರಾಯ್ ಎಂದೇ ಗುರುತಿಸಿಕೊಂಡ ಇವರು, ಸದ್ಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಮೊದಲೆಲ್ಲ ಬೇರೆ ಇಂಡಸ್ಟ್ರಿಗೆ ಹೋಗುವುದು ಕಷ್ಟ ಎನಿಸುತ್ತಿತ್ತು. ಆದರೆ, ಈಗ ‘ಕೆಜಿಎಫ್’ನಲ್ಲಿನ ಪಾತ್ರದಿಂದಾಗಿ ಎಲ್ಲೆಡೆ ಗುರುತಿಸಲ್ಪಡುತ್ತಿದ್ದೇನೆ. ಬೇರೆ ಭಾಷೆಯ ಚಿತ್ರರಂಗದವರು ನಮಗೆ ಕರೆದು ಅವಕಾಶ ಕೊಡಬೇಕಂತಿಲ್ಲ, ಅವರೂ ನಮ್ಮನ್ನು ಗುರುತಿಸುತ್ತಿದ್ದಾರಲ್ಲ ಅಷ್ಟು ಸಾಕು’ ಎನ್ನುತ್ತ ‘ಕೆಜಿಎಫ್’ ಚಿತ್ರತಂಡ, ಅದರ ನಾಯಕ ಯಶ್, ನಿರ್ಮಾಪಕ  ವಿಜಯ್ ಕಿರಗಂದೂರು ಕುರಿತು ಮೆಚ್ಚುಗೆಯ, ಕೃತಜ್ಞತೆಯ ಮಾತುಗಳನ್ನಾಡಿದರು ಹರೀಶ್.

ಪುಣ್ಯವಂತರಿಗಷ್ಟೇ ಈ ಅವಕಾಶ

ಮೊದಲೇ ಹೇಳಿದ ಹಾಗೆ ವೃತ್ತಿಜೀವನದಲ್ಲಿ ಹರೀಶ್ ಸಾಕಷ್ಟು ಏಳು-ಬೀಳುಗಳನ್ನು ಕಂಡವರು. ಸಿನಿಮಾರಂಗಕ್ಕೆ ಅಚಾನಕ್ ಆಗಿ ಬಂದವರು. ಹೀಗಾಗಿ ‘ಚಿತ್ರರಂಗಕ್ಕೆ ಬರಬಾರದಿತ್ತು ಅಂತ ಯಾವತ್ತಾದರೂ ಅನಿಸಿದ್ದಿದೆಯಾ?’ ಎಂದರೆ ಅವರು, ‘ಬಿಲ್​ಕುಲ್ ಇಲ್ಲ ...’ ಎನ್ನುತ್ತಾರೆ.

‘ಯಾರಿಗೂ ಸಿಗದ ಗೌರವ, ಹೆಸರು, ಹಣ ಸಿನಿಮಾರಂಗದಲ್ಲಿ ಸಿಗುತ್ತದೆ. ಇದು ಎಲ್ಲರಿಗೂ ಸಿಗುವಂಥದ್ದಲ್ಲ. ಪುಣ್ಯವಂತರಿಗಷ್ಟೇ ಸಿಗುವ ಅವಕಾಶವಿದು. ಇಷ್ಟು ವರ್ಷಗಳಲ್ಲಿ ಇಲ್ಲಿ ಯಾಕೆ ಬಂದೆ ಅಂತ ನನಗೆ ಯಾವತ್ತೂ ಅನಿಸಲಿಲ್ಲ’ ಎನ್ನುತ್ತಾರೆ. ಇನ್ನು ಚಿತ್ರರಂಗ ನಿಮ್ಮನ್ನು, ನಿಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಅಂತನಿಸಿದ್ದು ಇದೆಯಾ? ಎಂದರೆ, ಅವರು ಅದಕ್ಕೂ ಇಲ್ಲ ಎನ್ನುತ್ತಾರೆ. ‘ಚಿತ್ರರಂಗದವರು ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನಲು ಸಾಧ್ಯವಿಲ್ಲ.

ಅದಕ್ಕಿಂತ ಚಿತ್ರರಂಗದಲ್ಲಿ ಸಿಕ್ಕ ಅವಕಾಶವನ್ನು ನಾನು ಸರಿಯಾಗಿ ಬಳಸಿಕೊಂಡಿಲ್ಲ ಎಂಬುವುದೇ ಹೆಚ್ಚು ಸೂಕ್ತ. ನಾನೂ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ಗ್ರೂಪ್. ಎಲ್ಲ ನಟ-ನಿರ್ದೇಶಕರ ಜತೆಗೆ ಕ್ಲೋಸ್ ಇರಬೇಕು. ನಾನು ಹಾಗಿರಲಿಲ್ಲ, ನನ್ನ ನೇರನುಡಿ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ, ಇವತ್ತಲ್ಲ ನಾಳೆ ಸತ್ಯನುಡಿಗೆ ಬೆಲೆ ಇದ್ದೇ ಇರುತ್ತೆ ಎಂದು ನಂಬಿರುವವನು ನಾನು’ ಎನ್ನುತ್ತ ಒಂದಷ್ಟು ಅನುಭವಗಳನ್ನು ಹಂಚಿಕೊಂಡರು.

‘ಮೊದಲಿನಿಂದಲೂ ನಾನು ಹಾಗೆಯೇ. ಅಂಡರ್​ವರ್ಲ್ಡ್​ನವರನ್ನೂ ಎದುರಿಸುತ್ತೇನೆ ಎಂಬ ಧೈರ್ಯ ನನ್ನಲ್ಲಿತ್ತು. ನಾನು ಹೊರಗಿನ ಕೆಲವರಿಗೆ ವಿಲನ್ ಥರ ಕಾಣಿಸುತ್ತಿದ್ದೆ. ಹತ್ತಿರದವರಲ್ಲಿ ಕೆಲವರಿಗೆ ಕಷ್ಟಕ್ಕೆ ಆಗುತ್ತಿದ್ದುದರಿಂದ ಅವರಿಗೆ ಹೀರೋ ಥರ ಅನಿಸುತ್ತಿದ್ದೆ. ಹೀಗಿರುವಾಗಲೇ 2003ರಲ್ಲಿ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಒಮ್ಮೆ ಸಂಕಷ್ಟದಲ್ಲಿ ಸಿಲುಕಿಕೊಂಡೆ. ಜೀವಾವಧಿ ಶಿಕ್ಷೆಗೂ ಒಳಗಾಗಿದ್ದೆ. ಕೊನೆಗೆ ಅದೆಲ್ಲದರಿಂದ ಗೆದ್ದು ಬಂದೆ. ಅಲ್ಲಿಂದ ಬಂದ ಮೇಲೆ ಇಂಡಸ್ಟ್ರಿಯಲ್ಲಿ ಒಳ್ಳೆಯತನದಿಂದಲೇ ಗುರುತಿಸಿಕೊಳ್ಳಬೇಕು ಅಂತ ಸಂಕಲ್ಪ ಮಾಡಿದೆ. ಕಲೆಯಿಂದಲೇ ಮೇಲೆ ಬರಬೇಕು ಅಂದುಕೊಂಡೆ. ಸರಸ್ವತಿ ತಲೆ ತಗ್ಗಿಸಿದರೆ ಮಾತ್ರ ಒಲಿಯುವುದು ಎಂಬುದನ್ನು ಕಂಡುಕೊಂಡೆ. ಈಗ ‘ಕೆಜಿಎಫ್’ನಿಂದ ಮತ್ತೆ ಒಂದು ಹಂತ ಮೇಲಕ್ಕೆ ಬಂದಿದ್ದೇನೆ. ಇನ್ನು ನೂರು ಸಿನಿಮಾ ಮಾಡುತ್ತೇನೆ ಎಂಬ ಆಸೆ ಇಲ್ಲ. ಆದರೆ ಒಳ್ಳೆಯ ಸಿನಿಮಾಗಳನ್ನಷ್ಟೇ ಮಾಡಬೇಕು ಎಂಬ ಆಸೆ ಇದೆ’ ಎನ್ನುತ್ತ ಬದುಕಿನ ಸಿಹಿ-ಕಹಿ ಸಂಗತಿಗಳನ್ನು ಹೇಳಿಕೊಂಡರು.

ಒಳ್ಳೇ ಪರಿಚಯ ಬಿಟ್ಟುಹೋಗಬೇಕು

ಹರೀಶ್ ಎಂದಾಕ್ಷಣ ಸಾಮಾನ್ಯವಾಗಿ ಬಾಂಬೆ ಶೂಟರ್, ಕಿಲ್ಲರ್ ಥರದ ಪಾತ್ರಗಳೇ ಹೆಚ್ಚು ಕಾಣಿಸುವುದು ಸಹಜ. ಅವರಿಗೂ ಆ ಬಗ್ಗೆ ಬೇಸರ ಬಂದಿದೆ. ‘ಈಗಲೂ ಕೆಲವರು ಅಂಥದ್ದೇ ಪಾತ್ರಗಳನ್ನು ಹಿಡಿದುಕೊಂಡು ಬರುತ್ತಾರೆ. ಆದರೆ, ಈಗ ಅಂಥ ಪಾತ್ರಗಳನ್ನು ಒಪು್ಪತ್ತಿಲ್ಲ. ಸದ್ಯ ‘ಕೆಜಿಎಫ್’ ಜತೆಗೆ ಇನ್ನೆರಡು ಚಿತ್ರಗಳಿಗೆ ಒಪ್ಪಿದ್ದೇನೆ. ಅವನ್ನು ‘ಕೆಜಿಎಫ್’ ಮುಗಿದ ಬಳಿಕವೇ ಮಾಡುವುದು. ಅವರಿಗೂ ಹಾಗೇ ಹೇಳಿದ್ದೇನೆ. ಜತೆಗೆ ಇನ್ನೊಂದಷ್ಟು ಒಳ್ಳೆಯ ಆಫರ್ಸ್ ಬರುತ್ತಿವೆ’ ಎನ್ನುವ ಹರೀಶ್, ಮುಂದೆ ಸಾಧ್ಯವಾದರೆ ನಿರ್ವಣಕ್ಕೂ ಇಳಿಯುವ ಕನಸು ಹೊಂದಿದ್ದಾರೆ.

ತಮಗೆ ಬದುಕು ನೀಡಿದ ವೃತ್ತಿ-ಕೇತ್ರಕ್ಕೆ ತಾವೂ ಏನಾದರೂ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುವಂತೆ ಹರೀಶ್​ಗೂ ಇದೆಯಂತೆ. ‘ನಾನೇನು ಮಾಡಿದೆ ಎಂಬುವುದಕ್ಕಿಂತ ನಾನು ಇಂಡಸ್ಟ್ರಿಗೆ ಏನು ಮಾಡಬೇಕಿತ್ತು, ಏನು ಮಾಡಿದೆ ಎಂಬುದು ಮುಖ್ಯ ಎಂಬುದು ನನ್ನ ಭಾವನೆ. ನಾನು ಹೊಸಬನಾಗಿ ಬಂದಾಗ ಅದೆಷ್ಟೋ ಜನ ಸಹಕರಿಸಿದರು. ಈಗ ನಾವೂ ಹೊಸಬರಿಗೆ ಸಹಾಯ ಮಾಡಬೇಕು. ಬೇರೆಯವರು ನಮಗೆ ಒಳ್ಳೆಯದು ಮಾಡಿರುವಾಗ ನಮ್ಮಿಂದ ಬೇರೆಯವರಿಗೂ ಒಂದಷ್ಟು ಒಳ್ಳೆಯದಾಗಬೇಕು. ಜೀವನ ಎಂದರೆ ಅಷ್ಟೇ ಅಲ್ವಾ? ಕೆಲವರು ಜೀವನವನ್ನು ರೇಸ್ ಥರ ಪರಿಗಣಿಸುತ್ತಾರೆ. ಆದರೆ, ನಾನು ಯಾವ ರೇಸ್​ನಲ್ಲೂ ಇರಲಿಲ್ಲ, ಇರುವುದೂ ಇಲ್ಲ. ಸೆಟಲ್ ಆಗುವುದರ ಬಗ್ಗೆ ಹೇಳುವುದಾದರೆ ನಾನಷ್ಟೇ ಅಲ್ಲ, ಜತೆಗಿರುವ ಎಲ್ಲರೂ ಸೆಟಲ್ ಆಗಬೇಕು. ಅಂದಹಾಗೆ, ನಾನು ಬಿಜಿ ಇದ್ದೂ ನೋಡಿದ್ದೇನೆ, ಇಲ್ಲದೆಯೂ ನೋಡಿದ್ದೇನೆ. ಇಲ್ಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಂದೊಳ್ಳೆಯ ಪರಿಚಯ ಬಿಟ್ಟುಹೋಗಬೇಕು’ ಎನ್ನುವ ಆಶಯ ಹರೀಶ್ ಅವರದು.

ಉಡುಪಿಯ ಸಂಜಯ್ ದತ್

ಹರೀಶ್ ಅವರೇನೂ ಆಸೆಪಟ್ಟು ಚಿತ್ರರಂಗಕ್ಕೆ ಬಂದವರಲ್ಲ. ಸಿನಿಮಾ ಕಲಾವಿದ ಆಗಬೇಕು ಎಂಬ ಕನಸೂ ಅವರಿಗೆ ಇರಲಿಲ್ಲ. ಆದರೆ, ಅವರು ಸಂಜಯ್ ದತ್ ಅವರ ದೊಡ್ಡ ಅಭಿಮಾನಿ ಆಗಿದ್ದರು. ‘ಒಂದು ಕಾಲದಲ್ಲಿ ನಾನು ಊರಿನಲ್ಲಿ ಸಿನಿಮಾ ಕಲಾವಿದರ ರೀತಿಯೇ ಡ್ರೆಸ್ ಮಾಡುತ್ತಿದ್ದೆ. ಸಂಜಯ್ ದತ್​ರ ಅಭಿಮಾನಿಯಾಗಿರುವ ನಾನು ಆಗ ‘ಖಳ್ ನಾಯಕ್’ ಸಿನಿಮಾ ತೆರೆ ಕಂಡ ಸಂದರ್ಭದಲ್ಲಿ ಅವರಂತೆ ಡ್ರೆಸ್, ಹೇರ್​ಸ್ಟೈಲ್ ಮಾಡಿಕೊಂಡು ಓಡಾಡುತ್ತಿದ್ದೆ. ಆಗ ಕೆಲವರು ನನ್ನನ್ನು ಉಡುಪಿಯ ಸಂಜಯ್ ದತ್ ಎಂದೇ ಕರೆಯುತ್ತಿದ್ದರು. ಅದೇ ವೇಳೆ ಕುಂದಾಪುರದ ಶ್ರೀರಾಜ್ ಕೊಠಾರಿ ಮೂಲಕ ಉಪೇಂದ್ರ ಅವರ ಪರಿಚಯ ಆಯಿತು. ಹಾಗೆ ನಾನು ‘ಓಂ’ ಚಿತ್ರದಲ್ಲಿ ‘ಡಾನ್ ರಾಯ್’ ಪಾತ್ರ ಮಾಡಿದೆ. ಅಲ್ಲಿಂದ ಹರೀಶ್ ರಾಯ್ ಆದೆ. ಒಂದು ಕಾಲದಲ್ಲಿ ಸಂಜಯ್ ದತ್ ಅಭಿಮಾನಿಯಾಗಿ ಓಡಾಡುತ್ತಿದ್ದವ ಇಂದು ಅವರ ಜತೆಗೇ ಅಭಿನಯಿಸುತ್ತಿದ್ದೇನೆ’ ಎನ್ನುತ್ತ ತಮ್ಮ ಸಿನಿಪಯಣವನ್ನು ವಿವರಿಸಿದರು ಹರೀಶ್.