ಈ ಬಾರಿಯ ಗಣಪತಿ ಹಬ್ಬವನ್ನು ಚಿತ್ರರಂಗದ ಸೆಲೆಬ್ರಿಟಿಗಳು ಹೇಗೆ ಆಚರಿಸುತ್ತಾರೆ ಎಂಬುದರ ಕುರಿತು ಕಾವ್ಯಾ ಗೌಡ, ವಿಜಯವಾಣಿ ಜತೆಗೆ ಮಾತನಾಡಿದ್ದಾರೆ.
ಗಣೇಶ ಹಬ್ಬ ನನ್ನ ಇಷ್ಟ ಹಬ್ಬ. ನಮ್ಮದು ಗೌಡರ ಕುಟುಂಬ ಆಗಿರುವುದರಿಂದ ಊರಲ್ಲಿ ದೊಡ್ಡ ದೊಡ್ಡ ಗಣೇಶನನ್ನು ಕೂರಿಸುತ್ತಿದ್ದೆವು. ಗೌರಿ ಹಬ್ಬವೂ ಜೋರಾಗಿ ನಡೆಯುತ್ತದೆ. ಅಜ್ಜಿ ಮನೆಯಿಂದ ಸೀರೆ-ಬಳೆ ತರುವ ವಾಡಿಕೆ ಇದೆ. ಅದನ್ನು ತಂದು, ಗಣೇಶನ ಸಡಗರ ಶುರುವಾಗುತ್ತದೆ. ಸಂಪ್ರದಾಯಬದ್ಧವಾಗಿ ಗಣೇಶ ಹಬ್ಬವನ್ನು ಆಚರಿಸುತ್ತಿರುವುದರಿಂದ, ನೈವೇದ್ಯಕ್ಕೆ ವಿಶೇಷ ಖಾದ್ಯಗಳನ್ನು ಮಾಡಲಾಗುತ್ತದೆ. ಇನ್ನು ಗಣೇಶ ಹಬ್ಬ ಅಂದ ತಕ್ಷಣ ನನ್ನ ಬಾಲ್ಯದ ಒಂದಷ್ಟು ನೆನಪುಗಳು ಕಣ್ಮುಂದೆ ಬರುತ್ತವೆ. ಅದರಲ್ಲೂ ನನ್ನ ಮೊದಲ ಹಲ್ಲು ಬಿದ್ದದ್ದು ಗಣೇಶ ಹಬ್ಬದ ದಿನ. ಈಗಲೂ ನನಗೆ ಆ ಘಟನೆ ನೆನಪಿದೆ. ಕೊಬ್ಬರಿಯನ್ನು ತಿನ್ನುವಾಗ ಹಲ್ಲು ಮುರಿದಿತ್ತು. ಗಣೇಶ ವಿಸರ್ಜನೆ ವೇಳೆ ರಾತ್ರಿ 1 ಗಂಟೆಯವರೆಗೂ ಮೆರವಣಿಗೆಯಲ್ಲಿ ನಾನೂ ಭಾಗವಹಿಸುತ್ತಿದ್ದೆ. ಆದರೆ, ಈಗ ಅದೆಲ್ಲವನ್ನೂ ನೆನಪು ಮಾಡಿಕೊಳ್ಳಬೇಕಷ್ಟೇ.