ಬೆಂಗಳೂರು: ನೆರಳು-ಬೆಳಕಿನ ಆಟದ ಮೂಲಕ ಲಕ್ಷಾಂತರ ಸಿನಿಪ್ರೇಕ್ಷಕರನ್ನು ಸೆಳೆದವರು ಹೆಮ್ಮೆಯ ಕನ್ನಡಿಗ ವಿ.ಕೆ. ಮೂರ್ತಿ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಮೂರ್ತಿ ಕುರಿತು ಇದೀಗ ಒಂದು ಸಾಕ್ಷ್ಯಚಿತ್ರ ಸದ್ದಿಲ್ಲದೆ ನಿರ್ವಣಗೊಂಡಿದೆ. ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ ನಿರ್ದೇಶನದ 22 ನಿಮಿಷಗಳ ಈ ಸಾಕ್ಷ್ಯಚಿತ್ರ ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಪಡೆದಿದೆ.
ಮೈಸೂರು ಮೂಲದ ವಿ.ಕೆ. ಮೂರ್ತಿ ಛಾಯಾಗ್ರಹಣ ಮಾಡಿದ ಏಕೈಕ ಕನ್ನಡ ಚಿತ್ರವೆಂದರೆ, ಅದು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಹೂವು ಹಣ್ಣು’. ಆದರೆ, ಹಿಂದಿ ಚಿತ್ರರಂಗದಲ್ಲಿ ಅವರದ್ದು ದೊಡ್ಡ ಹೆಸರು. ಗುರುದತ್ ಅವರ ಕಾಯಂ ಕ್ಯಾಮರಾಮ್ಯಾನ್ ಆಗಿದ್ದ ಅವರು, ‘ಪ್ಯಾಸಾ’, ‘ಕಾಗಜ್ ಕೆ ಫೂಲ್’, ‘ಸಾಹಿಬ್ ಬೀವಿ ಔರ್ ಗುಲಾಮ್, ‘ಚೌದವೀ ಕಾ ಚಾಂದ್’ ಮುಂತಾದ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.
ಕಪು್ಪ-ಬಿಳುಪಿನ ಚಿತ್ರಗಳಲ್ಲಿನ ನೆರಳು-ಬೆಳಕಿನ ಆಟಕ್ಕೆ ವಿ.ಕೆ. ಮೂರ್ತಿ ಹೆಚ್ಚು ಜನಪ್ರಿಯರಾಗಿದ್ದರು. ಅವರ ಕುರಿತು ಸಾಕ್ಷ್ಯಚಿತ್ರ ಮಾಡಿದ್ದರ ಕುರಿತು ಮಾತನಾಡುವ ಬಸವರಾಜ್, ‘ನಾನು ಮೂರ್ತಿ ಅವರ ಜತೆಗೆ ಕೆಲಸ ಮಾಡಿದವನು. 60ರ ದಶಕದಲ್ಲಿ ಮುಂಬೈಗೆ ಕೆಲಸ ಅರಸಿಕೊಂಡು ಹೋದಾಗ ಅವರ ಪರಿಚಯವಾಯಿತು. ‘ತುಮ್ಸೆ ಅಚ್ಛಾ ಕೌನ್ ಹೇ’ ಮತ್ತು ‘ಶಿಕಾರ್’ ಚಿತ್ರಗಳಿಗೆ ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಆ ನಂತರ ನಾನು ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದೆ. ಹಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ನಂತರ, ಕೆಲವು ಸಾಕ್ಷ್ಯಚಿತ್ರಗಳನ್ನೂ ಮಾಡಿದೆ. ವಿ.ಕೆ. ಮೂರ್ತಿ ಕುರಿತು ಯಾಕೆ ಒಂದು ಡಾಕ್ಯುಮೆಂಟರಿ ಮಾಡಬಾರದು ಎಂದೆನಿಸಿ ಕೆಲಸ ಶುರು ಮಾಡಿದೆ, ಅವರನ್ನು ಮಾತಾಡಿಸಿದೆ. ಅವರನ್ನು ಹತ್ತಿರದಿಂದ ಬಲ್ಲ, ಅವರ ಕೆಲಸವನ್ನು ಅಧ್ಯಯನ ಮಾಡಿದ ಎಂ.ಎಸ್. ಸತ್ಯು, ಗಿರೀಶ್ ಕಾಸರವಳ್ಳಿ, ಗೋವಿಂದ್ ನಿಹಾಲನಿ ಮುಂತಾದವರನ್ನು ಮಾತನಾಡಿಸಿ ಈ ಸಾಕ್ಷ್ಯಚಿತ್ರ ಮಾಡಿದ್ದೇನೆ’ ಎನ್ನುತ್ತಾರೆ ಬಸವರಾಜ್. ‘ದೃಶ್ಯ ಗಾರುಡಿಗ’ ಹೆಸರಿನ ಈ ಸಾಕ್ಷ್ಯಚಿತ್ರಕ್ಕೆ ಇನ್ನಷ್ಟು ವಿಷಯಗಳನ್ನು ಸೇರಿಸಿ, ಮುಂಬೈನಲ್ಲಿ ಪ್ರದರ್ಶಿಸುವ ಯೋಚನೆ ಅವರಿಗಿದೆ.