ಸಿನಿವಾಣಿ

ಲಾಕ್​ಡೌನ್​ನಲ್ಲಿ ಶೂಟ್​ ಆದ ಮೊದಲ ಚಿತ್ರದ ಟ್ರೇಲರ್​ ಬಿಡುಗಡೆ ...

manjunathktgns

ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಚಿತ್ರರಂಗದವರೆಲ್ಲಾ ತಮ್ಮ ಮನೆಯವರ ಜತೆಗೆ ಕಾಲ ಕಳೆದರೆ, ನಿರ್ದೇಶಕ ವೆಂಕಟ್​ ಭಾರದ್ವಾಜ್​ ಮಾತ್ರ ಮನೆಯಲ್ಲೇ ಇದ್ದು, 'ದಿ ಪೈಂಟರ್' ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.

ಹೀಗೆ, ಲಾಕ್​ಡೌನ್​ನಲ್ಲಿ ತಯಾರಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ದಿ ಪೇಂಟರ್​' ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಶುಕ್ರವಾರ ಸಂಜೆ 'ರೋರಿಂಗ್ ಸ್ಟಾರ್​' ಮುರಳಿ ಅವರು ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬ್​ನ ಲಹರಿ ಚಾನಲ್​ನಲ್ಲಿ ಈ ಟ್ರೇಲರ್​ ಬಿಡುಗಡೆಯಾಗಿದೆ.

'ದಿ ಪೈಂಟರ್' ಚಿತ್ರವು, ಆಗಸ್ಟ್ 14ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ಆಲ್​ಟೈಮ್ ಥಿಯೇಟರ್) ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಶ್ರೇಯಸ್​ ಇಟಿ ಆಪ್​ ಡೌನ್​ಲೋಡ್​ ಮಾಡಿಕೊಂಡು, 50 ರೂ ಕೊಟ್ಟು ನೋಡಬಹುದು, ಬರುವ ಕಲೆಕ್ಷನ್ ನಲ್ಲಿ ಶೇಕಡಾ ೨೦% ರಷ್ಟು ಕನ್ನಡ ಚಿತ್ರ ಕಾರ್ಮಿಕರಿಗೆ ಕೊಡುವುದಾಗಿ 'ದಿ ಪೈಂಟರ್' ತಂಡ ಮೊದಲೇ ಘೋಷಿಸಿದೆ.

ದಿ ಪೈಂಟರ್’ ಲಾಕ್‌ಡೌನ್ ಪರಿಸ್ಥಿತಿಗೆ ತಕ್ಕಂತೆ ಒಂದು ಚಾಲೆಂಜಿಂಗ್ ಕಥೆಯಂತೆ. ಈ ಸಂದರ್ಭವನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಬಳಸುತ್ತಾರೆ ಮತ್ತು ಕೆಲವರು ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, 90 ನಿಮಿಷದ ಅವಧಿಯದ್ದಾಗಿರುತ್ತದಂತೆ.

ಐವರು ಛಾಯಾಗ್ರಾಹಕರು, 17 ಕಲಾವಿದರು ಮತ್ತು ತಂತ್ರಜ್ಞರನ್ನಿಟ್ಟುಕೊಂಡು, ಬೆಂಗಳೂರು, ಕನಕಪುರ, ಹೆಬ್ಬಾಳ ಮತ್ತು ತುಮಕೂರಿನಲ್ಲಿ ಎಲ್ಲರೂ ತಾವು ಇರುವ ಜಾಗಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲಾಗಿದೆ.