ಸಿನಿವಾಣಿ

ಹಳ್ಳಿಯಿಂದ ಬಂದ ಮುತ್ತಣ್ಣ ‘ಮೇಯರ್’ ಆದ: ವಿಪರೀತ ಜ್ವರದ ನಡುವೆಯೂ ಶೂಟಿಂಗ್ ಮುಂದುವರಿಸಿದ್ದ ಡಾ.ರಾಜ್

ಬೆಂಗಳೂರು: ಸ್ವಾತಂತ್ರ್ಯಗೊಂಡ ಭಾರತವು ಅಭಿವೃದ್ಧಿ ಚಲನೆಯಲ್ಲಿತ್ತು. ರೈಲು, ಬಸ್ ಸಂಚಾರ, ರಸ್ತೆ ಹೀಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ, ಅವು ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಹಳ್ಳಿಗಳು ಮೂಲಸೌಲಭ್ಯಗಳಿಲ್ಲದೆ ತೆವಳುತ್ತಿದ್ದವು. ಹೊಟ್ಟೆ-ಬಟ್ಟೆಗಾಗಿಯೇ ಪರದಾಡುವಂತಹ ಸ್ಥಿತಿ ನಿರ್ಮಾಣವಾದಾಗ, ಎಷ್ಟೋ ಹಳ್ಳಿಗರು ಬದುಕು ಕಟ್ಟಿಕೊಳ್ಳಲು ನಗರಗಳಿಗೆ ವಲಸೆ ಬರಲಾರಂಭಿಸಿದರು. ಅವರನ್ನು ಸಿಟಿ ಜನ ಬೇರೆ ರೀತಿಯಲ್ಲಿಯೇ ನೋಡುತ್ತಿದ್ದರು. ಇಂತಹ ಓರೆನೋಟವನ್ನು ತೊಡೆದುಹಾಕಿದ್ದು 1969ರಲ್ಲಿ ಬಿಡುಗಡೆಯಾಗಿದ್ದ ‘ಮೇಯರ್ ಮುತ್ತಣ್ಣ’ ಸಿನಿಮಾ. ಹಳ್ಳಿಯಿಂದ ವಲಸೆ ಬಂದ ವ್ಯಕ್ತಿಯೊಬ್ಬ ಮುಂದೆ ನಗರದಲ್ಲಿ ನಾಯಕನಾಗಿ ನಿಲ್ಲುತ್ತಾನೆ. ಆತ ಅನಕ್ಷರಸ್ಥನಾದರೂ ನೈತಿಕ ಬದುಕಿನಿಂದ ಎಲ್ಲರಿಗೂ ಮಾದರಿಯಾಗುತ್ತಾನೆ. ಹಳ್ಳಿ ಜನರು ಮುಗ್ಧರಾಗಿರಬಹುದು ಆದರೆ, ಅವರಲ್ಲೊಬ್ಬ ನಾಯಕನಿದ್ದಾನೆ ಎಂಬುದನ್ನು ಈ ಸಿನಿಮಾ ನಿರೂಪಿಸಿತ್ತು. ಆ ಕಾಲದಲ್ಲಿ ‘ಮೇಯರ್ ಮುತ್ತಣ್ಣ’ ಜನರ ಮೇಲೆ ತುಂಬ ಪ್ರಭಾವ ಬೀರಿದ್ದ ಸಿನಿಮಾ. ಹಲವಾರು ಯುವಕರು, ಈ ಸಿನಿಮಾದಿಂದ ಪ್ರಭಾವಿತರಾಗಿ ರಾಜಕೀಯಕ್ಕೆ ಬಂದಿದ್ದರಂತೆ. ಜನಪ್ರತಿನಿಧಿಗಳು ಲಂಚದಿಂದ ದೂರವಾಗಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾದರಂತೆ. ‘ಮೇಯರ್ ಮುತ್ತಣ್ಣ’ನಾಗಿ ರಾಜಕುಮಾರ್ ನಟಿಸಿದ್ದರು ಎಂಬ ಒಂದೇ ಕಾರಣಕ್ಕೆ ಅಷ್ಟು ಪ್ರಭಾವ ಬೀರಿತ್ತು ಎಂಬುದು ಹಲವರ ಅಭಿಪ್ರಾಯ. ಇಲ್ಲಿ ರಾಜಕುಮಾರ್ ಮುತ್ತಣ್ಣನ ಪಾತ್ರದ ಮೂಲಕ ಹಳ್ಳಿಯ ಪ್ರತಿನಿಧಿಯಾಗಿದ್ದಾರೆ. ಮಾಡದ ತಪ್ಪಿಗೆ ಹಳ್ಳಿಯಿಂದ ಬಹಿಷ್ಕಾರಗೊಂಡು ಬೆಂಗಳೂರಿಗೆ ಬರುವ ಅಮಾಯಕ ಮುತ್ತಣ್ಣ ಮೊದ ಮೊದಲು ಬದುಕು ಕಟ್ಟಿಕೊಳ್ಳಲು ಹರಸಾಹಸಪಡುತ್ತಾನೆ. ಮುಂದೆ ನೆಲೆ ನಿಂತ ಬಳಿಕ ಮುತ್ತಣ್ಣ ವಲಸಿಗರ ಪ್ರತಿನಿಧಿಯಾಗುತ್ತಾನೆ. ಇದು ಆತನನ್ನು ಕಾರ್ಪೋರೇಟರ್, ಹಾಗೆಯೇ ಮುಂದೆ ಮೇಯರ್ ತನಕ ತಂದು ನಿಲ್ಲಿಸುತ್ತದೆ. ಹಳ್ಳಿಯ ಅಮಾಯಕನೊಬ್ಬ ಬೆಂಗಳೂರಿನಂತಹ ಮಾಯಾನಗರಿಯಲ್ಲಿ ನಾಯಕನಾಗಿ ಬೆಳೆಯುತ್ತಾನೆ ಎಂಬುದನ್ನು 1969ರಲ್ಲಿಯೇ ನಿರೂಪಿಸಿದ್ದ ಕಥೆಯಿದು. ಇಲ್ಲಿ ರಾಜಕುಮಾರ್‌ಗೆ ಜೋಡಿಯಾಗಿ ಭಾರತಿ ಅಭಿನಯಿಸಿದ್ದರು. ದ್ವಾರಕೀಶ್, ತೂಗುದೀಪ್ ಶ್ರೀನಿವಾಸ್, ಬಾಲಣ್ಣ, ಎಂ.ಪಿ.ಶಂಕರ್ ಕಲಾ ಬಳಗದಲ್ಲಿದ್ದರು.

ಸಿದ್ದಲಿಂಗಯ್ಯ ನಿರ್ದೇಶನದ ಮೊದಲ ಸಿನಿಮಾ: ಸಿದ್ದಲಿಂಗಯ್ಯ ನಿರ್ದೇಶನದ ಮೊದಲ ಚಿತ್ರವಿದು. ಹಾಗೇ ದ್ವಾರಕೀಶ್ ನಿರ್ಮಾಣದ ಚೊಚ್ಚಲ ಚಿತ್ರವೂ ಹೌದು. ಅಷ್ಟಕ್ಕೂ ಈ ಚಿತ್ರ ಆರಂಭವಾಗಿದ್ದೆ ಡಾ.ರಾಜಕುಮಾರ್ ಕಾರಣದಿಂದ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಿದ್ದಲಿಂಗಯ್ಯ ಪ್ರತಿಭಾ ಸಾಮರ್ಥ್ಯವನ್ನು ಅಣ್ಣಾವ್ರ ಅರಿತಿದ್ದರು. ನಿಮಗೆ ಸಿನಿಮಾಕ್ಕೆ ಕಾಲ್‌ಶೀಟ್ ನೀಡುವೆ, ನಿರ್ಮಾಪಕರನ್ನು ಹುಡುಕಿಕೊಳ್ಳಿ ಎಂದಿದ್ದರಂತೆ. ಅದೇ ಸಮಯದಲ್ಲಿ ದ್ವಾರಕೀಶ್ ಕೂಡ ಅಣ್ಣಾವ್ರ ಕಾಲ್‌ಶೀಟ್‌ಗೆ ಕಾಯುತ್ತಿದ್ದರು. ಇಬ್ಬರು ಕೂಡಿ ಅಣ್ಣಾವ್ರ ಹತ್ತಿರ ಹೋದಾಗ ಸಿನಿಮಾ ಒಪ್ಪಿಕೊಂಡರಂತೆ. ‘ಅವತ್ತು ಅಣ್ಣಾವ್ರ ಮನಸ್ಸು ಮಾಡದಿದ್ದರೆ ಸಿದ್ದಲಿಂಗಯ್ಯ ನಿರ್ದೇಶಕನಾಗುತ್ತಿರಲಿಲ್ಲ, ದ್ವಾರಕೀಶ್ ನಿರ್ಮಾಪಕರಾಗುತ್ತಿರಲಿಲ್ಲ’ ಎನ್ನುತ್ತಾರೆ ಡಾ.ರಾಜ್ ಸಿನಿಮಾಗಳನ್ನು ಅಧ್ಯಯನ ಮಾಡಿರುವ ಹಾಲುಜೇನು ರಾಮಕುಮಾರ್.

ಅಣ್ಣಾವ್ರ ಕರ್ತವ್ಯನಿಷ್ಠೆ: ರಾಜಕುಮಾರ್ ನಟನೆಯನ್ನು ಉಸಿರಾಗಿಸಿಕೊಂಡಿದ್ದರು. ಎಂದಿಗೂ ಅವರು ಶೂಟಿಂಗ್ ವಿಳಂಬಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲವಂತೆ. ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರಿಗೆ ನನ್ನಿಂದ ತೊಂದರೆಯಾಗಬಾರದು ಎಂಬುದು ಅವರ ಕಾಳಜಿ. ಮದ್ರಾಸ್‌ನಲ್ಲಿ ‘ಮೇಯರ್ ಮುತ್ತಣ್ಣ’ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಅಣ್ಣಾವ್ರ ಸಹೋದರಿ ಶಾರದಾ ನಿಧನರಾದ ಸುದ್ದಿ ಬರುತ್ತದೆ. ಕೂಡಲೇ ಅವರು ಬೆಂಗಳೂರಿಗೆ ಹೊರಟುನಿಲ್ಲುತ್ತಾರೆ. ಆಸ್ಪತ್ರೆಗೆ ಬಂದು ಸಹೋದರಿಯ ಪಾರ್ಥಿವ ಶರೀರವನ್ನು ಸ್ವಂತ ಊರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತ್ಯಕ್ರಿಯೆ ನೆರವೇರಿಸಿ, ಅಂದೇ ಬೆಂಗಳೂರಿಗೆ ಮರಳಿದ್ದರಂತೆ. ಕೆಲ ದಿನಗಳವರೆಗೆ ಬಿಡುವು ಮಾಡಿಕೊಳ್ಳಿ ಎಂದು ದ್ವಾರಕೀಶ್ ಮನವಿ ಮಾಡಿದರೂ ಅಣ್ಣಾವ್ರ ಮಾತ್ರ ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ಮರುದಿನವೇ ಕೆಂಪೇಗೌಡ ಪ್ರತಿಮೆ ಮುಂದೆ ಶೂಟಿಂಗ್ ಮಾಡಿದ್ದರು. ಇದು ಅವರ ಕರ್ತವ್ಯ ನಿಷ್ಠೆ ತೋರಿಸುತ್ತದೆ. ಇನ್ನು ಇದೇ ಸಮಯದಲ್ಲಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಆಗಲೂ ಅವರು ‘ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ’ ಹಾಡಿನ ಚಿತ್ರೀಕರಣ ಮಾಡಿದ್ದರು’ ಎಂದು ಮಾಹಿತಿ ನೀಡುತ್ತಾರೆ ಹಾಲುಜೇನು ರಾಮಕುಮಾರ್.

1969ರಲ್ಲಿ ತೆರೆಕಂಡಿದ್ದ ‘ಮೇಯರ್ ಮುತ್ತಣ್ಣ’ ಬಳಿಕ ಹಲವಾರು ರಾಜ್ ಅಭಿಮಾನಿಗಳು ರಾಜಕೀಯ ಪ್ರವೇಶ ಮಾಡಿದ್ದರು. ಅಲ್ಲದೇ, ಆಗಿನ ಕಾಲದಲ್ಲಿ ಬೆಂಗಳೂರು ಕಾರ್ಪೋರೇಟರ್‌ಗಳು ಎಚ್ಚೆತ್ತುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿದ್ದರು. ಚಿತ್ರದಲ್ಲಿ ರಾಜಕುಮಾರ್, ನಟಿ ಭಾರತಿಗೆ ‘ಭಾರತೀಯತೆ’ಯ ಪಾಠ ಮಾಡುತ್ತಾರೆ. ಅದರಿಂದ ಸ್ಫೂರ್ತಿಗೊಂಡಿದ್ದ ಎಷ್ಟೋ ಚಿತ್ರಕಲಾವಿದರು, ಭಾರತದ ಸಂಸ್ಕೃತಿ, ಕಲೆ ಪರಂಪರೆಯನ್ನು ಪ್ರಚುರಪಡಿಸುವ ಚಿತ್ರಕಲೆಗೆ ಮುಂದಾಗಿದ್ದರು.

ಹಾಲುಜೇನು ರಾಮಕುಮಾರ್, ಡಾ.ರಾಜ್ ಸಿನಿಮಾಗಳ ಅಧ್ಯಯನಕಾರ