ಸಿನಿವಾಣಿ

ಅದು ಸುದೀಪ್ ಅಲ್ಲ, ನಾನು; ನಮಸ್ತೆ ಘೋಸ್ಟ್ ಬಗ್ಗೆ ಭರತ್ ಸ್ಪಷ್ಟನೆ

Webdesk - Ravikanth

ಬೆಂಗಳೂರು: ‘ನಮಸ್ತೆ ಘೋಸ್ಟ್’ ಎಂಬ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗ ವೈರಲ್ ಆಯಿತೋ, ಆಗ ಎಲ್ಲರಿಗಿಂತ ಹೆಚ್ಚಾಗ ಉದ್ವೇಗಗೊಂಡವರೆಂದರೆ ಭರತ್ ನಂದ. ಏಕೆಂದರೆ, ‘ನಮಸ್ತೆ ಘೋಸ್ಟ್’ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಅದರಲ್ಲಿ ಅವರು ನಾಯಕನಾಗಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪೋಸ್ಟರ್​ನಲ್ಲಿರುವವರು ಸಹ ಅವರೇ. ಅದು ಹೇಗೋ ತಪ್ಪು ಮಾಹಿತಿಯಿಂದ ಆ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಯಿತು. ಈ ವಿಷಯವನ್ನು ಅಲ್ಲಗಳೆದಿರುವ ಭರತ್, ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ ಎಂದಿದ್ದಾರೆ.

‘ನಮಸ್ತೆ ಗೋಸ್ಟ್’ ಎಂಬ ಹೆಸರೇ ಹೇಳುವಂತೆ ಇದೊಂದು ಹಾರರ್ ಚಿತ್ರವಾಗಿದ್ದು, ಈ ತರಹದ ಕಥೆ ಯಾವ ಭಾಷೆಯಲ್ಲೂ ಬಂದಿಲ್ಲ ಎನ್ನುತ್ತಾರೆ ಭರತ್, ‘ಈ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ‘ಡೋಂಟ್ ಸ್ಟಾಪ್ ದಿ ಗೇಮ್ ಎನ್ನುವ ಉಪಶೀರ್ಷಿಕೆ ಇದೆ’ ಎನ್ನುತ್ತಾರೆ. ಭರತ್​ಗೆ ನಾಯಕಿಯಾಗಿ ವಿದ್ಯಾ ರಾಜ್ ನಟಿಸಿದ್ದು, ಮಿಕ್ಕಂತೆ ಬಲ ರಾಜವಾಡಿ, ಶಿವಕುಮಾರ್ ಆರಾಧ್ಯ ಮುಂತಾದವರು ನಟಿಸಿದ್ದಾರೆ. ಯದುನಂದನ್ ಸಂಗೀತ, ಎಮ್​ಜಿ. ಮಧುಸೂಧನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರೀಕರಣ ಮುಗಿದಿದ್ದು, ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.