ಸಿನಿವಾಣಿ

ಅಪ್ಪು ನಮನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟು ಅಪರ್ಣಾ ಹೇಳಿದ್ದ ಆ ಒಂದು ಮಾತು ಮನಕಲಕುತ್ತೆ!

ಬೆಂಗಳೂರು: ಬಾರದ ಲೋಕಕ್ಕೆ ಪಯಣಿಸಿದ ನಟಿ, ನಿರೂಪಕಿ ಅಪರ್ಣಾ ಕನ್ನಡಿಗರಿಗೆ ಇನ್ನು ನೆನಪು ಮಾತ್ರ. ತಮ್ಮ ಸ್ವಚ್ಛ ಕನ್ನಡದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಮನೆ ಮಾಡಿರುವ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕ್ಯಾನ್ಸರ್​ ಎಂಬ ಮಹಾಮಾರಿ ಕನ್ನಡತಿಯನ್ನು ಬಲಿ ಪಡೆದಿದ್ದು, ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.

ಎಂದಿಗೂ ವಿವಾದಗಳನ್ನು ಮಾಡಿಕೊಳ್ಳದೇ ಬಹಳ ಅರ್ಥಪೂರ್ಣ ಬದುಕು ಸಾಗಿಸಿದ ಅಪರ್ಣಾ, ನಮ್ಮ ನಡುವೆ ಸಾಕಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅಪರ್ಣಾ ಅವರ ಗುಣ ಎಂಥದ್ದು ಎಂಬುದಕ್ಕೆ ಸಾಕಷ್ಟು ಉದಾರಣೆಗಳಿವೆ. ಅವುಗಳಲ್ಲಿ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರ ಅಪ್ಪು ನಮನ ಕಾರ್ಯಕ್ರಮವೂ ಒಂದು. ಈ ಕಾರ್ಯಕ್ರಮದ ನಿರೂಪಣೆ ಮಾಡಿದ ಅಪರ್ಣಾ, ತುಂಬಾ ಭಾವುಕವಾಗಿ ಮಾತನಾಡಿದರು.

ಕಾರ್ಯಕ್ರಮದ ನಿರೂಪಣೆ ಮಾಡಲು ಆಹ್ವಾನ ಬಂದಾಗಿನಿಂದಲೂ ನನಗನಿಸಿದ ಒಂದೇ ಒಂದು ಮಾತು ಏನೆಂದರೆ, ಶತದಿನೋತ್ಸವ ಕನ್ನಡದ ಬಗ್ಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಇಡೀ ದಿನ ಮಾಡೋಣ ಆದರೆ, ಇಂತಹ ಕಾರ್ಯಕ್ರಮ ಇನ್ಯಾವತ್ತು ಬೇಡ ಅನಿಸಿತು. ಪುನೀತ್​ ಎಂದಾಕ್ಷಣ ನನ್ನ ನೆನಪಿಗೆ ಬರುವುದು ಮುಕ್ತವಾದ ನಗು ಮತ್ತು ಆ ಸರಳತೆ ಎಂದು ಅಪರ್ಣಾ ಹೇಳಿದ್ದರು.

ಒಂದು ಮಾತಿದೆ. ಅದೇನೆಂದರೆ, ಸರಳತೆ ಎನ್ನುವುದು ದೊಡ್ಡತನ. ಆದರೆ, ಸರಳವಾಗಿರುವುದು ಮತ್ತು ಸರಳತೆಯನ್ನು ನಮ್ಮದಾಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅದನ್ನು ಅತ್ಯಂತ ಸುಲಭವಾಗಿ ತಮ್ಮದಾಗಿಸಿಕೊಂಡವರೆಂದರೆ ದೊಡ್ಮನೆ ಕುಟುಂಬ ಎಂದು ಅಪರ್ಣಾ ಭಾವುಕವಾಗಿ ಕಾರ್ಯಕ್ರಮದಲ್ಲಿ ಹೇಳಿದ್ದರು.

ಇನ್ನು ಅಪರ್ಣಾ ಅವರು ಅಪ್ಪು ನಮನ ಕಾರ್ಯಕ್ರಮದಲ್ಲಿ ಸುಮಾರು 10 ಗಂಟೆಗಳ ಕಾಲ ನಿರೂಪಣೆ ಮಾಡಿದರು. ಈ ವೇಳೆ ಅವರ ನಿರೂಪಣೆಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಕನ್ನಡದಲ್ಲಿ ಸ್ಪಷ್ಟವಾಗಿ ಮತ್ತು ಅಚ್ಚಕಟ್ಟಾಗಿ ನಿರೂಪಣೆ ಮಾಡುವ ಕೆಲವೇ ಕೆಲವು ನಿರೂಪಕಿಯರಲ್ಲಿ ಅಪರ್ಣಾ ಅವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಿದ್ದರು. ಇನ್ನು ಅಪರ್ಣಾ ಅವರು ಒಂದು ಕಾರ್ಯಕ್ರಮದ ನಿರೂಪಣೆ ಮಾಡಿದರೆ ಸಂಭಾವನೆ ಪಡೆಯುತ್ತಿದ್ದರು. ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಅಪರ್ಣಾ ಅವರೇ ಮೊಲದನೇ ಆಯ್ಕೆಯಾಗಿರುತ್ತಿದ್ದರು. ಅಲ್ಲದೆ, 50 ಸಾವಿರದಿಂದ 1 ಲಕ್ಷದವರೆಗೂ ಸಂಭಾವನೆ ಪಡೆಯುತ್ತಿದ್ದರು. ಆದರೆ, ಅಪ್ಪು ನಮನ ಕಾರ್ಯಕ್ರಮಕ್ಕೆ 1 ರೂಪಾಯಿ ಸಂಭಾವನೆಯನ್ನೂ ಪಡೆಯದೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ, ಪುನೀತ್​ರನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇಂತಹ ಒಳ್ಳೆಯ ಮನಸ್ಸಿನ ಅಪರ್ಣಾ ಇಂದು ನಮ್ಮ ನಡುವೆ ಇಲ್ಲದಿರುವುದು ನೋವಿನ ಸಂಗತಿಯಾಗಿದೆ.

ಅಂದಹಾಗೆ ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.

ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.

ಅಪರ್ಣ ಅವರು ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ಈವರೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅಪರ್ಣಾ ಅವರು 2005ರಲ್ಲಿ ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಅಪರ್ಣ ಅವರ ತಂದೆ ಕೆ.ಎಸ್‌.ನಾರಾಯಣಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.