ಸಿನಿವಾಣಿ

ಸದ್ಯಕ್ಕಿಲ್ಲ ಕಲ್ಯಾಣ!: ಹೆಚ್ಚಿದ ಸಂಭಾವನೆ, ಮದುವೆ ಕೈಬಿಟ್ಟ ತಮನ್ನಾ

ಸಿನಿಮಾ ನಟರಿಗಿಂತ ನಟಿಯರಿಗೆ ಪದೇಪದೆ ಎದುರಾಗುವ ಪ್ರಶ್ನೆ ಎಂದರೆ, ಮದುವೆ ಯಾವಾಗ? ಎಂಬುದು. ಈಗಾಗಲೇ 35 ದಾಟಿದರೂ ಮದುವೆ ಆಗದೇ ಇರುವ ನಟಿಯರು ಚಿತ್ರರಂಗದಲ್ಲಿ ಈಗಲೂ ಸಕ್ರಿಯರಾಗಿದ್ದಾರೆ. ಆ ಸಾಲಿನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಹೆಸರು ಮುಂಚೂಣಿಯಲ್ಲಿದೆ. ಇದೀಗ ಮದುವೆ ಬಗ್ಗೆ ಖಡಕ್ ಆಗಿಯೇ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರವರು.

‘ಮುಂದಿನ ಎರಡು ವರ್ಷ ಮದುವೆ ಯೋಚನೆ ಕೈಬಿಟ್ಟಿದ್ದೇನೆ’ ಎಂದಿದ್ದಾರೆ. ತಮನ್ನಾ ಹೀಗೆ ಹೇಳಿಕೊಳ್ಳುವುದಕ್ಕೆ ಬಲವಾದ ಕಾರಣವಿದೆ. ಬಿಗ್ ಬಜೆಟ್​ನ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವುದು ಒಂದೆಡೆಯಾದರೆ, ಅವರ ಮಾರುಕಟ್ಟೆ ಮೌಲ್ಯವೂ ಮೊದಲಿಗಿಂತ ದುಪ್ಪಟ್ಟಾಗಿದೆ. ಜಾಹೀರಾತು, ಏರಿದ ಸಂಭಾವನೆ ... ಹೀಗೆ ಹಲವು ಮೂಲಗಳಿಂದ ಹಣ ಹರಿದು ಬರುತ್ತಿದೆ. ಇಂಥ ಸಂದರ್ಭದಲ್ಲಿ ಮದುವೆಯಾದರೆ, ಇದೆಲ್ಲದಕ್ಕೂ ಕೊಕ್ಕೆ ಬೀಳುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕೆ, ಮದುವೆಯನ್ನು ಮುಂದೂಡಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ನಿಧಾನಕ್ಕೆ ಸಿನಿಮಾದಿಂದ ಹಿಂದೆ ಸರಿದು ಹೊಸ ಜೀವನಕ್ಕೆ ಕಾಲಿರಿಸುವ ಬಗ್ಗೆ ತಮನ್ನಾ ಹೇಳಿಕೊಂಡಿದ್ದರು. ಇದೀಗ ಆ ಪ್ಲಾನ್ ಉಲ್ಟಾ ಆಗಿದೆ. ಒಂದು ಚಿತ್ರಕ್ಕೆ ಸರಿಸುಮಾರು ಎರಡು ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಅಳೆದು ತೂಗಿ ಲೆಕ್ಕ ಹಾಕಿಯೇ, ‘ಸದ್ಯಕ್ಕೆ ಮದುವೆ ಬೇಡ’ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯ ತೆಲುಗಿನಲ್ಲಿ ಚಿರಂಜೀವಿ ಜತೆಗೆ ‘ಭೋಲಾ ಶಂಕರ್’, ‘ಎಫ್3’, ಹಿಂದಿಯ ‘ಬೋಲೆ ಚೂಡಿಯಾಂ’ ಸೇರಿ ಹಲವು ಸಿನಿಮಾಗಳು ತಮನ್ನಾ ಬತ್ತಳಿಕೆಯಲ್ಲಿವೆ. -ಏಜೆನ್ಸೀಸ್