'ಜನ ನಾಯಗನ್'​ ಸಿನಿಮಾ  
ಸಿನಿವಾಣಿ

'ಜನ ನಾಯಗನ್​'​ ಫ್ಯಾನ್ಸ್​ಗೆ ಸಿಹಿ ಸುದ್ದಿ! ಟೈಟಲ್​ ಕಾರ್ಡ್​ನಲ್ಲಿ ವಿಜಯ್​ ಹೆಸರು ಬದಲು? ನಿರ್ಮಾಪಕರು ಹೇಳಿದ್ದಿಷ್ಟು

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಸಿಎಂ ಆದಮೇಲೆ ವಿಜಯ್ ಬಹುನಿರೀಕ್ಷಿತ ಚಿತ್ರಕ್ಕೆ ಹೊಸ ಕಳೆ
  • ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು 'ಜನ ನಾಯಗನ್'​ ಸಜ್ಜು
  • ದಳಪತಿ ಅಭಿಮಾನಿಗಳ ಹೆಬ್ಬಯಕೆಯನ್ನು ಈಡೇರಿಸಲು ನಿರ್ಮಾಪಕರು ಮನಸ್ಸು
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್​ ಇದೀಗ ತಮಿಳುನಾಡಿನ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಜನತೆ ಮತ್ತು ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್ ಈಗ ಬಹುದಿನಗಳಿಂದ ರಿಲೀಸ್​ನಿಂದ ದೂರ ಉಳಿದಿದ್ದ ತಮ್ಮ ಬಹುನಿರೀಕ್ಷಿತ 'ಜನ ನಾಯಗನ್'​ ಮೂಲಕ ಸಿನಿಪ್ರಿಯರ ಎದುರು ಮಾಸ್​ ಎಂಟ್ರಿಕೊಡಲು ಸಜ್ಜಾಗಿದ್ದಾರೆ.
ತಮಿಳಿನ ಜನ ನಾಯಗನ್​ ರಿಲೀಸ್​ಗೆ ಶೀಘ್ರವೇ ಅಧಿಕೃತ ಮಹೂರ್ತ ಫಿಕ್ಸ್ ಆಗಲಿದ್ದು, ಈ ಬಾರಿ ಯಾವುದೇ ಬದಲಾವಣೆ ಅಥವಾ ಮುಂದೂಡಿಕೆ ಇರುವುದಿಲ್ಲ ಎಂಬುದಂತು ಖಚಿತವಾಗಿದೆ. ವಿಜಯ್​ ಅಭಿನಯದ ಕೊನೆ ಸಿನಿಮಾದ ನಿರ್ಮಾಪಕರಾದ ವೆಂಕಟ್ ಕೆ. ನಾರಾಯಣ ಅವರು ಇತ್ತೀಚೆಗೆ ಮಾತನಾಡಿದ್ದು, ಸೆನ್ಸಾರ್​ ಮಂಡಳಿಯಿಂದ ಈ ವಾರದೊಳಗೆ ಪ್ರಮಾಣ ಪತ್ರ ಲಭ್ಯವಾಗಲಿದೆ ಎಂಬ ಸಂತಸದ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್​ ಚಿತ್ರಕ್ಕೆ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್​ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಬಂದಿರಲಿಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್​ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್​ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಗೆಲುವಿನ ಬಳಿಕವೇ ಸಿನಿಮಾ ತೆರೆಗೆ ಬರಲಿದ್ದು, ಫ್ಯಾನ್ಸ್​ಗಳಲ್ಲಿ ನಟನ ಕ್ರೇಜ್ ದುಪ್ಪಟ್ಟಾಗಿದೆ.
ವೆಂಕಟ್ ಕೆ. ನಾರಾಯಣ ಅವರು, ನಾವೆಲ್ಲರೂ ಚಿತ್ರಮಂದಿರಗಳಲ್ಲಿ 'ಜನ ನಾಯಗನ್'​ ರಿಲೀಸ್​ಗಾಗಿ ತುಂಬ ಕುತೂಹಲದಿಂದ ಕಾಯುತ್ತಿದ್ದೇವೆ. ಈ ವಾರದೊಳಗೆ ಸಿಬಿಎಫ್​ಸಿ ನಮಗೆ ಪ್ರಮಾಣ ಪತ್ರ ನೀಡುವ ಸಾಧ್ಯತೆಗಳಿವೆ. ಇದಕ್ಕೆ ಅದರದ್ದೇ ಪ್ರಕ್ರಿಯೆಗಳೂ ಇವೆ. ಒಂದು ಬಾರಿ ಅವರು ನಮಗೆ ಅಧಿಕೃತವಾಗಿ ಸರ್ಟಿಫಿಕೆಟ್​ ಹಸ್ತಾಂತರಿಸಿದರೆ, ತಕ್ಷಣವೇ ಸಿನಿಮಾವನ್ನು ಥಿಯೇಟರ್​ಗಳಲ್ಲಿ ರಿಲೀಸ್​ ಮಾಡುತ್ತೀವಿ ಎಂದು ಹೇಳಿದ್ದಾರೆ.
"ವಿಜಯ್​ ಅವರು ತಮಿಳುನಾಡಿನ ಸಿಎಂ ಆಗ್ತಿದ್ದಂತೆ ಅವರ ಅಭಿಮಾನಿಗಳು ಒಂದೇ ವಿಷಯವನ್ನು ಪದೇ ಪದೇ ಕೇಳುತ್ತಿದ್ದಾರೆ. ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ಸಿಎಂ ದಳಪತಿ ವಿಜಯ್​ ಎಂದು ಬದಲಾಯಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಅದರ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವು ಸಿನಿಮಾ ಮಾಡಿದಾಗ, ಇಷ್ಟೊಂದು ಅಡಚಣೆಯನ್ನು ಎದುರಿಸುವಂತ ಪರಿಸ್ಥಿತಿ ಬರುತ್ತದೆ ಎಂದು ಊಹೆಯೂ ಮಾಡಿರಲಿಲ್ಲ" ಎಂದರು.
"ಇನ್ನೊಂದೆಡೆ, ವಿಜಯ್ ಸರ್ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಮತ್ತು ನಿಜವಾಗಿಯೂ ರಾಜ್ಯದ ಜನ ನಾಯಕರಾಗಿದ್ದಾರೆ ಎಂಬುದು ಸಂತೋಷದ ಕ್ಷಣ. ಬಹುಶಃ ಅವರು ಸಿಎಂ ಆದ ಮೇಲೆಯೇ ಈ ಸಿನಿಮಾ ಬಿಡುಗಡೆ ಮಾಡಬೇಕೆಂದು ವಿಧಿಲಿಖಿತ ಅನಿಸುತ್ತದೆ" ಎಂದು ವೆಂಕಟ್ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).