- ಜನ ನಾಯಗನ್ಗೆ ಶುಭಕೋರಿದ ಕೆವಿಎನ್ ಸಂಸ್ಥೆ, ಚಿತ್ರದ ನಿರ್ಮಾಪಕರು
- ರಿಲೀಸ್ಗೆ ಪರದಾಡುತ್ತಿದ್ದ ಬಹುನಿರೀಕ್ಷಿತ ಚಿತ್ರದ ರಿಲೀಸ್ಗೆ ಶೀಘ್ರವೇ ಮಹೂರ್ತ
- ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ವಿಜಯ್ ಹೆಸರು ಬದಲಿಸಿ
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ಗೆ ಸದ್ಯ ದೇಶವ್ಯಾಪಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಮತ್ತೊಂದೆಡೆ, ತಮಿಳಿನ ಜನ ನಾಯಗನ್ ರಿಲೀಸ್ಗೆ ಶೀಘ್ರವೇ ಅಧಿಕೃತ ಮಹೂರ್ತ ಫಿಕ್ಸ್ ಆಗಲಿದ್ದು, ಈ ಬಾರಿ ಯಾವುದೇ ಬದಲಾವಣೆ ಅಥವಾ ಮುಂದೂಡಿಕೆ ಇರುವುದಿಲ್ಲ ಎಂಬುದಂತು ಖಚಿತ.
ತನ್ನ ಚೊಚ್ಚಲ ರಾಜಕೀಯ ಪ್ರವೇಶದಲ್ಲಿಯೇ ತಮಿಳುನಾಡಿನ ಜನತೆಯಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ, ವಿಜಯ್ ಅಭಿನಯದ ಕೊನೆ ಸಿನಿಮಾ ಜನ ನಾಯಗನ್ ನಿರ್ಮಾಪಕರಾದ ವೆಂಕಟ್ ಕೆ. ನಾರಾಯಣ ಅವರು ನಟನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಅವರ ಮುಂದಿನ ರಾಜಕೀಯ ಪಯಣಕ್ಕೆ ಶುಭಕೋರಿದ್ದಾರೆ.
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್ ಚಿತ್ರಕ್ಕೆ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಇಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಗೆಲುವಿನ ಬಳಿಕವೇ ಸಿನಿಮಾ ತೆರೆಗೆ ಬರಲಿದ್ದು, ಫ್ಯಾನ್ಸ್ಗಳಲ್ಲಿ ನಟನ ಕ್ರೇಜ್ ದುಪ್ಪಟ್ಟಾಗಿದೆ.
ಕೆವಿಎನ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಪಕರು, ಹೃದಯತುಂಬಿದ ಅಭಿನಂದನೆಗಳು ನಮ್ಮ ಜನ ನಾಯಗನ್ ದಳಪತಿ ವಿಜಯ್ ಸರ್ ಎಂದು ಟ್ವೀಟ್ ಮಾಡಿದರು. ಇದನ್ನು ನೋಡ್ತಿದ್ದಂತೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ ವಿಜಯ್ ಫ್ಯಾನ್ಸ್, ಸಿನಿಮಾ ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ದಯವಿಟ್ಟು ಟೈಟಲ್ ಕಾರ್ಡ್ನಲ್ಲಿ ಅವರ ಹೆಸರನ್ನು ಬದಲಿಸಿ ಎಂದು ಒತ್ತಾಯಿಸಿದ್ದಾರೆ.
ಅನೇಕ ವಿಜಯ್ ಅಭಿಮಾನಿಗಳು ಮತ್ತು ಬೆಂಬಲಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ದಳಪತಿ ವಿಜಯ್ ಅಲ್ಲ, ಸಿಎಂ ದಳಪತಿ ವಿಜಯ್ ಎಂದು ಬದಲಿಸಿ. ಒಬ್ಬ ಲೀಡರ್ನನ್ನು ಘೋಷಿಸಿಲ್ಲ, ಜನರೇ ಅವರನ್ನು ಆಯ್ಕೆ ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂಬ ಹಲವು ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅಭಿಮಾನಿಗಳ ಆಗ್ರಹಕ್ಕೆ ಜನ ನಾಯಗನ್ ನಿರ್ದೇಶಕರು ಮತ್ತು ನಿರ್ಮಾಪಕರು ಟೈಟಲ್ ಕಾರ್ಡ್ನಲ್ಲಿ ಹೆಸರು ಬದಲಿಸುತ್ತಾರೋ? ಇಲ್ಲವೋ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).