ತೆಲುಗು ನಟ ರಾಮಚರಣ್ ತೇಜಾ "ಆರ್ಆರ್ಆರ್' ಮೂಲಕ ಪ್ಯಾನ್ ವರ್ಲ್ಡ್ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ "ಆರ್ಆರ್ಆರ್'ನಿಂದಲೇ ಸದ್ದು ಮಾಡುತ್ತಿದ್ದಾರೆ. ಆದರೆ, ಈ "ಆರ್ಆರ್ಆರ್' ಅಂದರೆ "ರೋಲ್ಸ್ ರಾಯ್ಸ್ ರಾಮಚರಣ್' ಎಂದರ್ಥ. ಅದಕ್ಕೆ ಕಾರಣ ಬರೋಬ್ಬರಿ 7.5 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಇವಿ ಐಶಾರಾಮಿ ಕಾರು ಖರೀದಿಸಿದ್ದಾರೆ ರಾಮ್. ವಿಶೇಷ ಅಂದರೆ ಇದು ಹೈದರಾಬಾದ್ನ ಮೊದಲ ಸ್ಪೆಕ್ಟರ್ ಕಾರು ಎನ್ನಲಾಗಿದೆ.
576 ಬಿಎಚ್ಪಿ ಸಾಮರ್ಥ್ಯವಿರುವ, 2890 ಕೆಜಿ ತೂಕದ ವಿದ್ಯುತ್ ಚಾಲಿತ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕೇವಲ 4.5 ಸೆಕೆಂಡುಗಳಲ್ಲಿ 0ರಿಂದ 100 ಕಿಲೋಮೀಟರ್ ವೇಗ ಪಡೆಯಬಲ್ಲದು. ಒಮ್ಮೆ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ದೂರ ಸಾಗುವ ಈ ಕಾರನ್ನು ಕೇವಲ 95 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಇತ್ತೀಚೆಗಷ್ಟೆ ಅನಂತ್ ಅಂಬಾನಿ & ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪಾಲ್ಗೊಳ್ಳಲು ಅಹಮದಾಬಾದ್ಗೆ ಹೊರಟ ರಾಮಚರಣ್, ಕುಟುಂಬ ಸಮೇತ ಇದೇ ರೋಲ್ಸ್ ರಾಯ್ಸ್ ಸ್ಪೆಕ್ಟರ್ನಲ್ಲಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಇದಲ್ಲದೇ ರಾಮಚರಣ್ ಬಳಿ ಮರ್ಸಿಡೀಸ್ ಮೇಬ್ಯಾಕ್ ಜಿಎಲ್ಎಸ್ 600, ಆಷ್ಟನ್ ಮಾರ್ಟಿನ್ ವಾಂಟೇಜ್, ೆರಾರಿ ಪೋರ್ಟೊಫೀನೊ, ಬಿಎಂಡಬ್ಲ್ಯೂ 7 ಸಿರೀಸ್, ರೇಂಜ್ ರೋವರ್, ಮರ್ಸಿಡೀಸ್ ಬೆಂಜ್ ಜಿಎಲ್ಇ ಸೇರಿ ಹಲವು ಕಾರುಗಳಿವೆ. ಸದ್ಯ ಅವರು ಶಂಕರ್ ನಿರ್ದೇಶಿಸುತ್ತಿರುವ "ಗೇಮ್ ಚೇಂಜರ್'ನಲ್ಲಿ ನಟಿಸುತ್ತಿದ್ದು, ಸಿನಿಮಾ ಇದೇ ಸೆಪ್ಟೆಂಬರ್ನಲ್ಲಿ ರಿಲೀಸ್ ಆಗಲಿದೆ.