ಬಾಲಿವುಡ್ ನಟಿ ತಾಪ್ಸೀ ಪನ್ನುಗೂ, ಒಟಿಟಿಗೂ ಒಂದು ನಂಟಿದೆ. ಹೀಗೆ ಹೇಳುವುದಕ್ಕೆ ಬಲವಾದ ಕಾರಣವೂ ಇದೆ. ಅದೇನೆಂದರೆ, ತಾಪ್ಸೀ ನಟನೆಯ ಮೂರು ಸಿನಿಮಾಗಳು ಸತತವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಇದೀಗ ನಾಲ್ಕನೇ ಚಿತ್ರವೂ ಸಹಿತ ಒಟಿಟಿಯಲ್ಲಿಯೇ ಬಿಡುಗಡೆ ಆಗುತ್ತಿದೆ! ಅದೇ ‘ಲೂಪ್ ಲಪೇಟಾ’. 2020ರ ಫೆಬ್ರವರಿಯಲ್ಲಿ ತಾಪ್ಸೀ ನಟನೆಯ ‘ಥಪ್ಪಡ್’ ಸಿನಿಮಾ ಹೊರತುಪಡಿಸಿ, ಅವರ ಬೇರಾವ ಸಿನಿಮಾ ಚಿತ್ರಮಂದಿರಗಳಲ್ಲಿ ನೇರವಾಗಿ ಬಿಡುಗಡೆಯಾದ ಉದಾಹರಣೆ ಇಲ್ಲ.
ನೆಟ್ಫ್ಲಿಕ್ಸ್ನಲ್ಲಿ ‘ಹಸೀನಾ ದಿಲ್ರುಬಾ’, ಡಿಸ್ನಿ ಹಾಟ್ಸ್ಟಾರ್ ಪ್ಲಸ್ನಲ್ಲಿ ‘ಅನಾಬೆಲ್ಲಾ ಸೇತುಪತಿ’, ಜೀ 5ನಲ್ಲಿ ‘ರಶ್ಮಿ ರಾಕೆಟ್’ ಚಿತ್ರಗಳು ಸ್ಟ್ರೀಮ್ ಆಗಿದ್ದವು. ಇದೀಗ ಆಕಾಶ್ ಭಾಟಿಯಾ ನಿರ್ದೇಶನದ ‘ಲೂಪ್ ಲಪೇಟಾ’ ಚಿತ್ರವು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಇನ್ನೇನು ಶೀಘ್ರದಲ್ಲಿ ಅದರ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದ್ದು, ಈ ಮೂಲಕ ತಾಪ್ಸೀ ನಟನೆಯ ನಾಲ್ಕನೇ ಸಿನಿಮಾ ಒಟಿಟಿಯಲ್ಲಿ ತೆರೆಕಂಡಂತಾಗಲಿದೆ.
‘ಲೂಪ್ ಲಪೇಟಾ’ ಚಿತ್ರವು ಜರ್ಮನ್ ಭಾಷೆಯ ‘ರನ್ ಲೋಲಾ ರನ್’ ಎಂಬ ಚಿತ್ರದ ಅಧಿಕೃತ ರಿಮೇಕ್ ಆಗಿದ್ದು, ತಾಪ್ಸಿ ಜತೆಗೆ ತಾಹಿರ್ ರಾಜ್ ಭಾಸಿನ್ ಮತ್ತು ಶ್ರೇಯಾ ಧನ್ವಂತರಿ ನಟಿಸಿದ್ದಾರೆ. 2021ರ ಜನವರಿಯಲ್ಲಿಯೇ ‘ಲೂಪ್ ಲಪೇಟಾ’ ಸಿನಿಮಾ ತೆರೆಗೆ ಬರಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ.