Ajith Kumar ಚಿತ್ರ Instagram
ಚೆನ್ನೈ: ಕಾಲಿವುಡ್ ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಕೇವಲ ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ತಮ್ಮ ಸರಳತೆ ಮತ್ತು ಸಹೃದಯತೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದ್ಯ ತಮ್ಮ ಸಿನಿಮಾ ಶೂಟಿಂಗ್‌ಗಳ ಜೊತೆಗೆ ರೇಸಿಂಗ್ ವೃತ್ತಿಜೀವನದಲ್ಲಿ ಅತ್ಯಂತ ಬ್ಯುಸಿಯಾಗಿರುವ ಅಜಿತ್, ಈ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತಮ್ಮ ಯುವ ಅಭಿಮಾನಿಗಳಿಗೆ ವಿಡಿಯೋ ಕರೆ ಮಾಡಿ ಮಾತನಾಡುವ ಮೂಲಕ ಸಪ್ರೈಸ್ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಆರಂಭವಾಗುವುದೇ ನಿಮ್ಮ ತಂದೆಯ ಸ್ನೇಹಿತರ ಪಟ್ಟಿ ನಿಮ್ಮನ್ನು ಆಶ್ಚರ್ಯಗೊಳಿಸಿದಾಗ..ಎಂಬ ಕುತೂಹಲಕಾರಿ ಸಾಲುಗಳೊಂದಿಗೆ. ಆದಾಗ್ಯೂ, ಯುವ ಅಭಿಮಾನಿಯ ತಂದೆ ನಟ ಅಜಿತ್ ಕುಮಾರ್ ಅವರಿಗೆ ಆಪ್ತರಾಗಿರುವುದರಿಂದ ಅವರ ಮಕ್ಕಳಿಗೆ ನೇರವಾಗಿ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.
ಅಭಿಮಾನಿಯ ಮಕ್ಕಳೊಂದಿಗೆ ಆತ್ಮೀಯ ಮಾತುಕತೆ
ವರದಿಗಳ ಪ್ರಕಾರ, ಅಜಿತ್ ಕುಮಾರ್ ಅವರ ಆಪ್ತರು ಹಾಗೂ ಆತ್ಮೀಯ ಸ್ನೇಹಿತರಾಗಿರುವ ವ್ಯಕ್ತಿಯೊಬ್ಬರು ತಮ್ಮ ಮಕ್ಕಳಿಗಾಗಿ ಈ ವಿಶೇಷ ವೀಡಿಯೊ ಕರೆಯನ್ನು ಏರ್ಪಡಿಸಿದ್ದರು. ಈ ಕರೆಯಲ್ಲಿ ನಟ ತಮ್ಮ ಸ್ನೇಹಿತನ ಮಕ್ಕಳಾದ ಅಕ್ಕ- ತಮ್ಮನೊಂದಿಗೆ ಪ್ರೀತಿಯಿಂದ ಮಾತನಾಡುವುದನ್ನು ಕಾಣಬಹುದು. ಮಕ್ಕಳ ಓದು, ವಿದ್ಯಾಭ್ಯಾಸ ಹಾಗೂ ಅವರ ದಿನಚರಿಯ ಬಗ್ಗೆ ಅತ್ಯಂತ ಆಪ್ತವಾಗಿ ವಿಚಾರಿಸಿ, ಅವರಿಗೆ ಪ್ರೋತ್ಸಾಹ ನೀಡಿದ್ದಾರೆ.
ಮಕ್ಕಳೊಂದಿಗೆ ಸುದೀರ್ಘವಾಗಿ ಮಾತನಾಡಿದ ಅಜಿತ್, ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ, ನಿಮಗೆ ಸುಂದರವಾದ ಜೀವನ ಸಿಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಒಬ್ಬ ಬಳಕೆದಾರ ಲಕ್ಕಿ ಲಕ್ಕಿಯೆಸ್ಟ್ ಗರ್ಲ್ ಎವರ್ ಎಂದು ಕಾಮೆಂಟ್ ಮಾಡಿದರೆ, ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ತಮ್ಮವರನ್ನು ಮತ್ತು ಮಕ್ಕಳನ್ನು ಅವರು ನಡೆಸಿಕೊಳ್ಳುವ ರೀತಿ ಅವರ ದೊಡ್ಡ ಗುಣಕ್ಕೆ ಸಾಕ್ಷಿ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಅಜಿತ್ ಕುಮಾರ್ ಅವರ ವೃತ್ತಿ ಮತ್ತು ವೈಯಕ್ತಿಕ ಜೀವನ
ದಶಕಗಳ ಕಾಲ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿನುಗಿದ ತಮಿಳು ನಟ ಅಜಿತ್ ಕುಮಾರ್, ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಮೊದಲ ಪ್ರೀತಿಯಾದ 'ರೇಸಿಂಗ್' ಕಡೆಗೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. 2000ರ ದಶಕದ ಆರಂಭದಲ್ಲಿ ರೇಸಿಂಗ್ ಲೋಕದಲ್ಲಿ ಸಕ್ರಿಯರಾಗಿದ್ದ ಅಜಿತ್, ಸುದೀರ್ಘ ಬಿಡುವಿನ ಬಳಿಕ 2024 ರಲ್ಲಿ ಮತ್ತೆ ಅಧಿಕೃತವಾಗಿ ಟ್ರ್ಯಾಕ್‌ಗೆ ಮರಳಿದ್ದರು.
ಅಜಿತ್ ನಟಿ ಶಾಲಿನಿ ಅವರನ್ನು ವಿವಾಹವಾಗಿದ್ದು, ಅವರಿಬ್ಬರಿಗೂ ಅನುಷ್ಕಾ ಮತ್ತು ಆದ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಅವರ ತಾಯಿ ಮೋಹಿನಿ ಮಣಿ ಮೇ 30 ರಂದು ನಿಧರಾಗಿದಾಗ ಅವರು ವೈಯಕ್ತಿಕವಾಗಿ ನಷ್ಟವನ್ನು ಅನುಭವಿಸಿದರು. ಕುಟುಂಬವು ತಮ್ಮ ನಷ್ಟದ ದುಃಖವನ್ನು ವ್ಯಕ್ತಪಡಿಸಿ ಗೌಪ್ಯತೆಯನ್ನು ಕೋರಿತ್ತು (ಏಜೆನ್ಸೀಸ್).