ಸಿನಿವಾಣಿ

ಬ್ಯಾಡ್​ ಗರ್ಲ್​ ವಿವಾದ; ವೆಟ್ರಿಮಾರನ್​, ಪ.ರಂಜಿತ್​ ವಿರುದ್ಧ ನಿರ್ದೇಶಕ ಜಿ. ಮೋಹನ್​ ಆಕ್ರೋಶ

ತಮಿಳು ಚಿತ್ರರಂಗದಲ್ಲಿ ಜಾತಿ ಸಂರ್ಷ ಪ್ರಾರಂಭವಾದಂತಿದೆ. ತಮಿಳು ನಿರ್ದೇಶಕ ಮೋಹನ್​ ಕ್ಷತ್ರಿಯನ್​ ನಿರ್ದೇಶಕರಾದ ವೆಟ್ರಿಮಾರನ್​, ಪ. ರಂಜಿತ್​ ಮತ್ತು ವರ್ಷಾ ಭರತ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಅದಕ್ಕೆ ಕಾರಣ "ಬ್ಯಾಡ್​ ಗರ್ಲ್​' ಚಿತ್ರದ ಟೀಸರ್​. ಹೌದು, ಇತ್ತೀಚೆಗಷ್ಟೆ "ವಿಡುದಲೈ' ಸರಣಿ ಖ್ಯಾತಿಯ ನಿರ್ದೇಶಕ ವೆಟ್ರಿಮಾರನ್​ ನಿರ್ಮಾಣದ, ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಪ್ರಸ್ತುತಪಡಿಸುತ್ತಿರುವ, ವರ್ಷಾ ಭರತ್​ ನಿರ್ದೇಶನದ "ಬ್ಯಾಡ್​ ಗರ್ಲ್​' ಚಿತ್ರದ ಟೀಸರ್​ ರಿಲೀಸ್​ ಮಾಡಲಾಗಿದೆ. ಅಂಜಲಿ ಶಿವರಾಮನ್​, ಹೃದು ಹರೂನ್​, ಶಾಂತಿಪ್ರಿಯಾ, ತೆಜೀಂತಮ್​ ಅರುಣಾಸಲಂ, ಶಶಾಂಕ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.

ಬ್ರಾಹ್ಮಣ ಕುಟುಂಬದ ಹುಡುಗಿಯೊಬ್ಬಳು ಶಾಲಾದಿನಗಳಿಂದಲೇ ಬಾಯ್​ಫ್ರೆಂಡ್​ ಬಯಸುವ, ಕಾಲೇಜಿಗೆ ಹೋದಂತೆ ಬಾಯ್​ಫ್ರೆಂಡ್​​ಗಳನ್ನು ಬದಲಿಸುವ, ಮದ್ಯಪಾನ ಮಾಡುತ್ತಾ ತನ್ನದೇ ಲೋಕದಲ್ಲಿ ತೇಲುವ, ಆಕೆಯ ಆಟಗಳಿಗೆ ಪಾಲಕರು ವಿರೋಧಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಧಮಕಿ ಹಾಕುವಂತೆ ಚಿತ್ರಿಸಲಾಗಿದೆ. ಸದ್ಯ ಈ ಟೀಸರ್​ಗೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಹೆಣ್ಣುಮಕ್ಕಳ ಸ್ವಾತಂತ್ರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರೆ, ಕೆಲವರು ಬ್ರಾಹ್ಮಣರನ್ನೇ ಏಕೆ ಟಾರ್ಗೆಟ್​ ಮಾಡುತ್ತಿದ್ದೀರಿ? ಎಂದು ಚಿತ್ರತಂಡವನ್ನು ಹಲವರು ಪ್ರಶ್ನಿಸುತ್ತಿದ್ದಾರೆ.

ಪ. ರಂಜಿತ್​ ವರ್ಸಸ್​ ಮೋಹನ್​

"ಬ್ಯಾಡ್​ ಗರ್ಲ್​' ಟೀಸರ್​ ಬಗ್ಗೆ ನಿರ್ದೇಶಕ "ಕಬಾಲಿ', "ತಂಗಳಾನ್​' ನಿರ್ದೇಶಕ ಪ. ರಂಜಿತ್​ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರಿಗೆ "ದ್ರೌಪದಿ', "ರುದ್ರ ತಾಂಡವಂ', "ಬಕಾಸುರನ್​' ನಿರ್ದೇಶಕ ಮೋಹನ್​ ಸವಾಲು ಹಾಕಿದ್ದಾರೆ. "ಬ್ರಾಹ್ಮಣ ಹುಡುಗಿಯ ಖಾಸಗಿ ಜೀವನವನ್ನು ಬೋಲ್ಡ್​ ಆಗಿ ತೋರಿಸುವುದು ಇವರಿಗೆ ಯಾವಾಗಲೂ ಹರ್ಷದಾಯಕ. ವೆಟ್ರಿಮಾರನ್​, ಅನುರಾಗ್​ ಕಶ್ಯಪ್​ ಮತ್ತು ಸಂಗಡಿಗರಿಂದ ಇನ್ನೇನನ್ನು ನಿರೀಸಲು ಸಾಧ್ಯ? ಬ್ರಾಹ್ಮಣ ತಂದೆ, ತಾಯಿಯನ್ನು ವಿಲನ್​ನಂತೆ ತೋರಿಸುವುದು ಹಳೆಯದಾಗಿದೆ. ನಿಮ್ಮದೇ ಜಾತಿಯ ಹುಡುಗಿಯನ್ನು ಈ ರೀತಿ ಚಿತ್ರಿಸಿ, ನಿಮ್ಮ ಕುಟುಂಬಗಳಿಗೇ ಮೊದಲು ತೋರಿಸಿ' ಎಂದು ಮೋಹನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.