ಚೆನ್ನೈ: ಸುಂದರ ಟ್ರಾವೆಲ್ಸ್ ಚಿತ್ರ ಖ್ಯಾತಿಯ ತಮಿಳು ನಟಿ ರಾಧಾ ಅವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ದೂರಿನಲ್ಲಿ ಸಬ್ ಇನ್ಸ್ಪೆಕ್ಟರ್ನನ್ನು ತನ್ನ ಗಂಡನೆಂದು ಉಲ್ಲೇಖಿಸಿರುವ ರಾಧಾ, ತನಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ಅನುಮಾನ ಪಡುವುದು ಹಾಗೂ ದಾಂಪತ್ಯ ನಿಷ್ಠೆಯನ್ನು ಪ್ರಶ್ನಿಸುತ್ತಾರೆಂದು ದೂರಿದ್ದಾರೆ.
ಅಂದಹಾಗೆ ಸಬ್ ಇನ್ಸ್ಪೆಕ್ಟರ್ ಹೆಸರು ವಸಂತ್ರಾಜ್ (40). ಕೆಲವು ತಿಂಗಳ ಹಿಂದೆ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆನ್ನಲಾಗಿದೆ. ಆದರೆ, ವಸಂತ್ರಾಜ್ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳು ಸಹ ಇದ್ದರು. ಇದಕ್ಕೂ ಮುನ್ನ ರಾಧಾ ಸಿನಿಮಾ ನಿರ್ದೇಶಕರೊಬ್ಬರನ್ನು ಮದುವೆ ಆಗಿದ್ದರು. ಡಿವೋರ್ಸ್ ಪಡೆದ ಬಳಿಕ ತನ್ನ ಮಗನೊಂದಿಗೆ ಚೆನ್ನೈನ ಸಾಲಿಗ್ರಾಮ್ನಲ್ಲಿ ವಾಸವಿದ್ದಳು. ಎರಡನೇ ಮದುವೆ ಬಗ್ಗೆ ಮೊದಲನೇ ಪತ್ನಿಗೆ ತಿಳಿದು ಆಕೆಯು ಸಹ ತಿರುವಣಮಿಯುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಹೀಗಿರುವಾಗ ವಿವಾದಾತ್ಮಕ ಸಂಬಂಧದೊಂದಿಗೆ ರಾಧಾ ಮತ್ತೊಮ್ಮೆ ಸುದ್ದಿಯಾದರು. 2013ರ ನವೆಂಬರ್ನಲ್ಲಿ ಉದ್ಯಮಿ ಫೈಜೂಲ್ ವಿರುದ್ಧ ಕೇಸು ದಾಖಲಿಸಿದ್ದರು. 6 ವರ್ಷಗಳಿಂದ ಸಂಬಂಧದಲ್ಲಿದ್ದೆವು, ಇದೀಗ ಮದುವೆ ಆಗಲು ನಿರಾಕರಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದರು. ಅಲ್ಲದೆ, ಮದುವೆಗೆ ಒತ್ತಾಯಿಸಿದರೆ ಖಾಸಗಿ ವಿಡಿಯೋ ಸೋರಿಕೆ ಮಾಡುವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದರು. ಇದಾದ ಕೆಲವೇ ವಾರಗಳನ್ನು ತನ್ನ ದೂರನ್ನು ರಾಧಾ ವಾಪಸ್ಸು ಪಡೆದುಕೊಂಡಿದ್ದರು. (ಏಜೆನ್ಸೀಸ್)