ಬೆಂಗಳೂರು: ಶುಕ್ರವಾರ ಬಿಡುಗಡೆ ಆಗಿರುವ ಐದು ಚಿತ್ರಗಳ ಪೈಕಿ ‘ನಾವೆಲ್ರೂ ಹಾಫ್ ಬಾಯಿಲ್ಡ್’ ಸಿನಿಮಾ ಸಹ ಒಂದು. ಹಿರಿಯ ನಟರಾದ ಉಮೇಶ್, ದೇವದಾಸ್ ಕಾಪಿಕ್ಕಾಡ್, ತಬಲಾ ನಾಣಿ ಮುಂತಾದವರು ನಟಿಸಿರುವ ಈ ಚಿತ್ರ ಯಾವಾಗ ಶುರುವಾಯಿತೋ, ಯಾವಾಗ ಮುಕ್ತಾಯವಾಯಿತೋ ಎಂಬ ವಿಷಯ ಗೊತ್ತಿಲ್ಲ. ಆದರೆ, ಜ.24ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ.
ತಬಲಾ ನಾಣಿ ಅಭಿನಯದ 100ನೇ ಚಿತ್ರ ಇದಾಗಿರುವುದು ವಿಶೇಷ. ಕಳೆದ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಣಿ, ದೊಡ್ಡ ಹೆಸರು ಮಾಡಿದ್ದು ಗುರುಪ್ರಸಾದ್ ನಿರ್ದೇಶನದ ‘ಮಠ’ ಚಿತ್ರದಲ್ಲಿ. ಈ ಚಿತ್ರದಲ್ಲಿನ ಅವರ ಕುಡುಕ ವೇಣುಗೋಪಾಲನ ಪಾತ್ರ ಯಾವ ಪರಿ ಜನಪ್ರಿಯವಾಯಿತು ಎಂದರೆ, ಮುಂದಿನ ದಿನಗಳಲ್ಲಿ ಯಾವುದೇ ಚಿತ್ರದಲ್ಲಿ ಕುಡುಕನ ಪಾತ್ರ ಎಂದರೆ ಅದಕ್ಕೆ ನಾಣಿ ಅವರೇ ಸೂಕ್ತ ವ್ಯಕ್ತಿ ಎಂಬ ನಂಬಿಕೆ ಚಿತ್ರರಂಗದಲ್ಲಿ ಬಲವಾಗಿತ್ತು. ಆ ನಂತರ ‘ಎದ್ದೇಳು ಮಂಜುನಾಥ’ ಅವರಿಗೆ ಇನ್ನೊಂದು ದೊಡ್ಡ ಗೆಲುವು ಕೊಟ್ಟಿತು. ಬಳಿಕ ‘ರ್ಯಾಂಬೋ’, ‘ವಿಕ್ಟರಿ’, ‘ಭಜರಂಗಿ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮುಂತಾದ ಚಿತ್ರಗಳಲ್ಲಿ ನಾಣಿ ಅವರ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಈಗ ನಾಣಿ ‘ನಾವೆಲ್ರೂ ಹಾಫ್ ಬಾಯಿಲ್ಡ್’ ಮೂಲಕ ನೂರು ಚಿತ್ರಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ‘ನಾವೆಲ್ರೂ ಹಾಫ್ ಬಾಯಿಲ್ಡ್’ ಚಿತ್ರವನ್ನು ಶಿವರಾಜ್ ವೆಂಕಟಾಚ್ಚ ನಿರ್ದೇಶನ ಮಾಡಿದರೆ, ಅಮೀರ್ ಅಹಮದ್ ನಿಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹೊಸಬರು ಕೆಲಸ ಮಾಡಿದ್ದು, ಬೆನ್ನೆಲುಬಾಗಿ ನಾಣಿ, ಉಮೇಶ್ ಮುಂತಾದವರು ಇದ್ದಾರೆ.