ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಸಮಯಪ್ರಜ್ಞೆಗೆ ಹೆಸರುವಾಸಿ. ಅಷ್ಟು ಕಟ್ಟುನಿಟ್ಟಾಗಿ ಶೂಟಿಂಗ್ ಸಮಯದಲ್ಲಿ ಸಮಯಪ್ರಜ್ಞೆ ಪಾಲಿಸುತ್ತಾರೆ. ಆದರೆ, ಬಾಲಿವುಡ್ಗೆ ಪದಾರ್ಪಣೆ ಮಾಡಿದ ಪ್ರಾರಂಭದಲ್ಲಿ ಅವರಿಗೆ ಕಟ್ಟುನಿಟ್ಟಾಗಿ ಸಮಯ ಪಾಲಿಸಿದ್ದೇ ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗಿತ್ತಂತೆ.
ಇದನ್ನೂ ಓದಿ : ಡಾಲಿ ಧನಂಜಯ್ ಹುಟ್ಟುಹಬ್ಬ ಸಂಭ್ರಮ ಶುರು, ಹುಟ್ಟು ಹಬ್ಬಕ್ಕೆ ‘ಅಣ್ಣ FROM MEXICO’ ಸಿನಿಮಾ ಅನೌನ್ಸ್
ಆ ಬಗ್ಗೆ ಮೌನ ಮುರಿದಿರುವ ಸುಷ್ಮಿತಾ, "ಪ್ರಾರಂಭದಲ್ಲೇ ಸೂಪರ್ಸ್ಟಾರ್ ಸಲ್ಮಾನ್ ಖಾನ್, ಶಾರುಖ್ ಖಾನ್ ಜತೆ ನಟಿಸುವ ಅವಕಾಶ ದೊರೆಯಿತು. ಸ್ಟಾರ್ಗಳ ಜತೆ ನಟಿಸುವಾಗ ಸಮಯದ ಬಗ್ಗೆ ಹೆಚ್ಚು ಗಮನಹರಿಸಬಾರದು. ಯಾವಾಗ ಬೇಕಾದರೂ ಶೂಟಿಂಗ್ ಪ್ರಾರಂಭವಾಗಬಹುದು, ಎಷ್ಟು ತಡವಾಗಿ ಬೇಕಾದರೂ ಮುಗಿಯಬಹುದು. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಬಂದು, ಸಮಯಕ್ಕೆ ಸರಿಯಾಗಿ ಹೊರಟುಬಿಡುತ್ತೇನೆ ಎಂದು ಮೊದಲೇ ಹೇಳಿಬಿಡುತ್ತಿದ್ದೆ. ಹೀಗಾಗಿ ಅದು ಕೆಲವರಿಗೆ ಹಿಡಿಸುತ್ತಿರಲಿಲ್ಲ. ಈಕೆಯ ವರ್ತನೆ ಸರಿಯಿಲ್ಲ, ಏನಂದುಕೊಂಡಿದ್ದಾಳೆ? ಎಂದು ಅಸಮಾಧಾನಗೊಳ್ಳುತ್ತಿದ್ದರು. ಸೆಟ್ನಲ್ಲಿ ಯಾರೇ ಇದ್ದರೂ 6 ಗಂಟೆಗೆ ನಾನು ಅಲ್ಲಿಂದ ಹೊರಟುಬಿಡುತ್ತಿದ್ದೆ. ಆ ರೀತಿಯ ಶಿಸ್ತನ್ನು ಇವತ್ತಿನವರೆಗೂ ಪಾಲಿಸಿಕೊಂಡು ಬಂದಿದ್ದೇನೆ. ಸರಿಯಾದ ಸಮಯಕ್ಕೆ ಸೆಟ್ಗೆ ಬರುತ್ತೇನೆ. ಹೀರೋ ಆರು ತಾಸು ತಡವಾಗಿ ಬಂದರೂ ನನ್ನ ಶೂಟಿಂಗ್ ಮುಗಿಸಿ ಹೊರಟುಬಿಡುತ್ತೇನೆ. ಈಗ ಬಹುತೇಕ ಮಂದಿ ನನ್ನ ಸಮಯಕ್ಕೆ ಹೊಂದಿಕೊಂಡಿದ್ದಾರೆ. ಮತ್ತೊಬ್ಬರ ಕಾಲಹರಣ ಮಾಡುವುದು ಕಡಿಮೆಯಾಗಿದೆ' ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಸುಷ್ಮಿತಾ ಸೇನ್ ಅಭಿನಯದ ಶ್ರೀಗೌರಿ ಸಾವಂತ್ ಎಂಬ ಮಂಗಳಮುಖಿ ಜೀವನಾಧಾರಿತ 'ತಾಲಿ' ವೆಬ್ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸುಷ್ಮಿತಾ ನಟನೆ ಬಗ್ಗೆ ಎಲ್ಲೆಡೆ ಉತ್ತಮ ಮಾತುಗಳು ಕೇಳಿಬರುತ್ತಿವೆ.
-ಏಜೆನ್ಸೀಸ್