ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದು, ಯಾಕೆ ತಮಗೆ ಸುಶಾಂತ್ ಸಾವಿಗೆ ರಿಯಾ ಕಾರಣ ಎಂದನಿಸುತ್ತಿದೆ ಎಂದು ಎಂಟು ಅಂಶಗಳನ್ನು ಪಟ್ಟಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಈಗ ಸುಶಾಂತ್ ಅವರ ಬಾಡಿಗಾರ್ಡ್ ಸಹ ರಿಯಾ ವಿರುದ್ಧ ಕೆ.ಕೆ. ಸಿಂಗ್ ವ್ಯಕ್ತಪಡಿಸಿರುವ ಅನುಮಾನ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್ ಆತ್ಮಹತ್ಯೆಯ ಹಿಂದೆ ರಿಯಾ ಕೈವಾಡವಿದೆ ಎಂದು ಸಹ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಸುಶಾಂತ್ ಯಾವಾಗಲೂ ಮಲಗಿರುತ್ತಿದ್ದರೆ, ರಿಯಾ ಅವರ ಕುಟುಂಬದವರು ಪಾರ್ಟಿ ಮಾಡುತ್ತಿದ್ದರು. ರಿಯಾ ಬಂದ ನಂತರ ಸುಶಾಂತ್ ಅವರಲ್ಲಿ ಸಾಕಷ್ಟು ಬದಲಾವಣೆ ಆಯಿತು. ಅಷ್ಟೇ ಅಲ್ಲ, ನನ್ನೊಬ್ಬನನ್ನು ಬಿಟ್ಟು ಸುಶಾಂತ್ ಮನೆಯ ಎಲ್ಲಾ ಕೆಲಸದವರನ್ನು ರಿಯಾ ಬದಲಾಯಿಸಿದರು. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ನನಗಂತೂ ಅವರ ಸಾವಿನ ಹಿಂದೆ ರಿಯಾ ಕೈವಾಡ ಇದೆ ಎಂದನಿಸುತ್ತಿದೆ. ಈ ಕುರಿತು ಸೂಕ್ತ ತನಿಖೆ ಆಗಬೇಕು' ಎಂದು ಆಗ್ರಹಿಸಿದ್ದಾರೆ.
'ಯೂರೋಪ್ನಿಂದ ವಾಪಸ್ಸಾದ ಸುಶಾಂತ್ ಆರೋಗ್ಯ ಕೆಟ್ಟಿತು. ಅವರು ಯಾವಾಗಲೂ ಮಲಗಿರುತ್ತಿದ್ದರು. ಅದಕ್ಕೂ ಮುನ್ನ ಅವರು ಬಹಳ ಆಕ್ಟಿವ್ ಆಗಿದ್ದರು. ಸ್ವಿಮ್ಮಿಂಗ್, ರನ್ನಿಂಗ್, ಜಿಮ್ಮಿಂಗ್ ಅಂತ ಬ್ಯುಸಿಯಾಗಿದ್ದರು. ವಾಪಸ್ಸು ಬಂದ ನಂತರ ಸುಶಾಂತ್ ಮಂಕಾದರು. ಕ್ರಮೇಣ ರಿಯಾ ಅವರ ಮನೆಯ ಮೇಲೆ ಹಿಡಿತ ಸಾಧಿಸಿದರು. ಅವರ ಬಂಧು-ಮಿತ್ರರು ಬಂದು ಹೋಗುವುದು ಜಾಸ್ತಿ ಆಯಿತು' ಎಂದು ಅವರು ಹೇಳಿಕೊಂಡಿದ್ದಾರೆ.