ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ 'ದಿಲ್ ಬೇಚಾರಾ' ಚಿತ್ರ ಬಿಡುಗಡೆಯಾಗಿದೆ. ಸುಶಾಂತ್ ಸಾವಿನ ನಂತರ ಬಿಡುಗಡೆಯಾದ ಈ ಚಿತ್ರಕ್ಕೆ ಅನುಕಂಪ ಅದೆಷ್ಟು ವರ್ಕೌಟ್ ಆಗಿದೆ ಎಂದರೆ, ಒಂದೇ ದಿನಕ್ಕೆ ಜಗತ್ತಿನಾದ್ಯಂತೆ 95 ಮಿಲಿಯನ್ ಜನ ಈ ಚಿತ್ರ ನೋಡಿದ್ದರು. ಇಷ್ಟೆಲ್ಲಾ ವೀಕ್ಷಣೆಯಿಂದ ಚಿತ್ರ ನಿರ್ಮಾಣ ಸಂಸ್ಥೆಗೆ ಅದೆಷ್ಟು ಲಾಭವಾಯಿತೋ ಗೊತ್ತಿಲ್ಲ. ಸುಶಾಂತ್ಗೆ ಮಾತ್ರ ಹಣಕಾಸಿನ ವಿಷಯದಲ್ಲಿ ಹೆಚ್ಚು ಲಾಭವಾಗಿಲ್ಲ.
ಇದನ್ನೂ ಓದಿ: ಬಿಡುಗಡೆಯಾಯ್ತು ‘ನಮಗಾಗಿ ಜೀವ ಕೊಟ್ಟವರು’ ಹಾಡು…
ಹೌದು, ಸುಶಾಂತ್ ಅವರಿಗೆ 'ದಿಲ್ ಬೇಚಾರಾ' ಚಿತ್ರದಿಂದ ಹೆಚ್ಚೇನೂ ಲಾಭವಾಗಿಲ್ಲವಂತೆ. ಹಾಗಂತ ಸುಶಾಂತ್ ಅವರ ಸ್ನೇಹಿತರೊಬ್ಬರು ಹೇಳಿಕೊಂಡಿದ್ದಾರೆ. 'ದಿಲ್ ಬೇಚಾರಾ' ಚಿತ್ರದ ಅಗ್ರೀಮೆಂಟ್ ಆಗುವಾಗ ಜತೆಗಿದ್ದ ಸುಶಾಂತ್ ಅವರ ಸ್ನೇಹಿತರೊಬ್ಬರೇ ಈ ವಿಷಯವನ್ನು ಹೇಳಿರುವುದರಿಂದ ನಂಬಲೇಬೇಕಿದೆ.
ಅವರ ಪ್ರಕಾರ, ಸುಶಾಂತ್ ಈ ಚಿತ್ರ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಪ್ರತೀ ಚಿತ್ರಕ್ಕೆ ಆರರಿಂದ ಎಂಟು ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ, 'ದಿಲ್ ಬೇಚಾರಾ'ಗಾಗಿ ಅವರು ಪಡೆದಿರುವುದು ಕೇವಲ ಮೂರು ಕೋಟಿ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಸುಶಾಂತ್ ಮತ್ತು ನಿರ್ದೇಶಕ ಮುಕೇಶ್ ಛಾಬ್ರಾ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಇನ್ ಫ್ಯಾಕ್ಟ್, ಸುಶಾಂತ್ ಈ ಚಿತ್ರವನ್ನು ಒಪ್ಪಿದ್ದೇ, ಮುಕೇಶ್ಗೆ ಒಳ್ಳೆಯದಾಗಲೀ ಎಂಬ ದೃಷ್ಟಿಯಿಂದ. ಆದರೂ ಚಿತ್ರತಂಡದ ಮುಂದೆ ಸಾಕಷ್ಟು ಸವಾಲುಗಳಿದ್ದವು. ಚಿತ್ರಕ್ಕೆ ಬಜೆಟ್ ಹೆಚ್ಚು ಸಿಗದಿದ್ದಾಗ, ಸುಶಾಂತ್ ತಮ್ಮ ಸಂಭಾವನೆಯನ್ನು ಅರ್ಧಕ್ಕೆ ಇಳಿಸಿಕೊಂಡರು' ಎಂದು ಹೇಳಿದ್ದಾರೆ.
ಜತೆಗೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಜತೆಗೂ ಸುಶಾಂತ್ಗೆ ಒಳ್ಳೆಯ ಸಂಬಂಧವಿತ್ತಂತೆ. ಆ ಸಂಸ್ಥೆ ಚಿತ್ರ ನಿರ್ಮಿಸುವುದಕ್ಕೆ ಒಪ್ಪಿಕೊಂಡಾಗ, ಎಲ್ಲರಿಗೂ ಅನುಕೂಲವಾಗಲೀ ಎಂಬ ನಿಟ್ಟಿನಲ್ಲಿ ಸುಶಾಂತ್ ತಮ್ಮ ಸಂಭಾವನೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.