ಬೆಂಗಳೂರು: ಕಿರುತೆರೆಯಲ್ಲಿ ಗುರುತಿಸಿಕೊಂಡ ಅದೆಷ್ಟೋ ನಟ, ನಟಿಯರು ಬೆಳ್ಳಿತೆರೆ ಮೇಲೆಯೂ ಕಮಾಲ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ‘ತ್ರಿಬಲ್ ರೈಡಿಂಗ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಯಾಗಿದ್ದರು. ಇದೀಗ ‘ಸೀತಾವಲ್ಲಭ’ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ಸುಪ್ರಿತಾ ಸತ್ಯನಾರಾಯಣನ್ ಸರದಿ. ಶ್ರೀರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಲಾಂಗ್ಡ್ರೖೆವ್’ ಸಿನಿಮಾದಲ್ಲಿ ಅರ್ಜುನ್ ಯೋಗಿ ನಾಯಕನಾಗಿ ನಟಿಸಿದ್ದು, ಅವರಿಗೆ ಕಿರುತೆರೆ ಸೀತೆ ಜೋಡಿಯಾಗಿದ್ದಾರೆ. ಪ್ರಯಾಣದಲ್ಲಿ ಗೊತ್ತಿಲ್ಲದ ನಡೆಯುವ ಅನಾಹುತಗಳನ್ನೇ ಕಥೆಯಾಗಿಸಿಕೊಂಡು ಸಿನಿಮಾ ಮಾಡಿರುವ ನಿರ್ದೇಶಕರು, ನೈಜ ಘಟನೆಯೇ ಈ ಕಥೆಗೆ ಸ್ಪೂರ್ತಿ ಎನ್ನುತ್ತಾರೆ. ‘ನಡೆದ ಘಟನೆವೊಂದರ ಎಳೆಯನ್ನಿಟ್ಟುಕೊಂಡು ‘ಲಾಂಗ್ಡ್ರೖೆವ್’ ಸಿನಿಮಾ ಮಾಡಿದ್ದೇವೆ. ಲವ್ಸ್ಟೋರಿ ಜತೆಗೆ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಸದ್ಯ ಮೂರು ಹಾಡುಗಳ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಶ್ರೀರಾಜ್. ಗುಡ್ವಿಲ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮಂಜುನಾಥ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜಿಮ್ ಕೀರ್ತಿ ಕಾರ್ಯಕಾರಿ ನಿರ್ವಪಕ ರಾಗಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾ ಗ್ರಹಣ, ವಿಕಾಸ್ ವಸಿಷ್ಟ ಸಂಗೀತ, ಪವನ್ ರಾಮಿಶೆಟ್ಟಿ ಸಂಕಲನದ ಹೊಣೆ ಹೊತ್ತಿದ್ದಾರೆ.
ಸಿನಿಮಾ ಮತ್ತು ಸೀರಿಯಲ್ ಎರಡರಲ್ಲೂ ತೊಡಗಿಸಿಕೊಂಡಿದ್ದೇನೆ. ಒಂದೇ ಕ್ಷೇತ್ರಕ್ಕೆ ಅಂಟಿಕೊಂಡಿಲ್ಲ. ಅಲ್ಲಿ ಅವಕಾಶ ಇದ್ದಾಗ ಅಲ್ಲಿ, ಸಿನಿಮಾ ಸಿಕ್ಕರೆ ಸಿನಿಮಾ. ಎರಡನ್ನೂ ನಿರ್ವಹಣೆ ಮಾಡುತ್ತೇನೆ.
| ಸುಪ್ರಿತಾ ಸತ್ಯನಾರಾಯಣನ್ ನಟಿ